ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಹಿನ್ನೆಲೆ : ಬಿಲ್ಲವ ಬ್ರಿಗೇಡ್‌ಗೆ ಸಿಗದ ಬೈಕ್ ರ‍್ಯಾಲಿ ಅನುಮತಿ

Update: 2020-12-07 12:33 GMT

ಮಂಗಳೂರು, ಡಿ.7: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇತಿಹಾಸ ಪುರುಷರಾದ ‘ಕೋಟಿ ಚೆನ್ನಯ’ ನಾಮಕರಣ ಮಾಡುವಂತೆ ಆಗ್ರಹಿಸಿ ‘ಬಿಲ್ಲವ ಬ್ರಿಗೇಡ್’ ಸಂಘಟನೆಯು ಸೋಮವಾರ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಬಜ್ಪೆ ಕೆಂಜಾರು ವಿಮಾನ ನಿಲ್ದಾಣಕ್ಕೆ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆಯ ಅನುಮತಿ ಸಿಗದ ಕಾರಣ ಕೆಲಕಾಲ ಗೊಂದಲ ಸೃಷ್ಟಿಯಾದ ಘಟನೆ ನಡೆದಿದೆ.

ಬಿಲ್ಲವ ಬ್ರಿಗೇಡ್ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ವಾರದ ಹಿಂದೆ ಕುದ್ರೋಳಿ ಕ್ಷೇತ್ರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಬೈಕ್ ರ್ಯಾಲಿ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಸೋಮವಾರ ಸಂಘಟನೆಯ ಕಾರ್ಯಕರ್ತರು ಕುದ್ರೋಳಿ ಬಳಿ ಜಮಾಯಿಸಿದರೂ  ಅನುಮತಿ ಸಿಗದ ಕಾರಣ ರ್ಯಾಲಿ ನಡೆಸದಂತೆ ಪೊಲೀಸರು ತಡೆ ಹಿಡಿದರು. ಇದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಆದರೂ ಪಟ್ಟುಬಿಡದ ಕಾರ್ಯಕರ್ತರು ಕಾವೂರು ಜಂಕ್ಷನ್‌ನಿಂದ ರ್ಯಾಲಿ ಆರಂಭಿಸಿದರು. ಆದರೆ ಪೊಲೀಸರು ಅಲ್ಲಿಂದಲೂ ರ್ಯಾಲಿ ನಡೆಸಲು ಅನುಮತಿ ನೀಡದ ಕಾರಣ ಬೈಕ್ ರ್ಯಾಲಿಯು ಚದುರತೊಡಗಿತು. ಅಂತೂ ಸುಮಾರು 500ರಷ್ಟು ಕಾರ್ಯಕರ್ತರು ಮರವೂರು ಬಳಿ ಜಮಾಯಿಸಿ ಅಲ್ಲಿಂದ ಕಾಲ್ನಡಿಗೆ ಮೂಲಕ ಬಜ್ಪೆ ಕೆಂಜಾರು ವಿಮಾನ ನಿಲ್ದಾಣಕ್ಕೆ ತೆರಳಿದರು.

ಈ ಸಂದರ್ಭ ಮಾತನಾಡಿದ ಬೈಕ್ ರ್ಯಾಲಿ ಸಂಚಲನಾ ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್ ಬೈಕ್ ರ್ಯಾಲಿ ಬಗ್ಗೆ ಮೊದಲೇ ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಮನವಿ ಮಾಡಲಾಗಿತ್ತು. ಆದರೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಿರಿಯ ಅಧಿಕಾರಿಗಳು ರವಿವಾರ ರಾತ್ರಿ 7 ಗಂಟೆಯ ವೇಳೆ ರ್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದರು. ಆದಾಗ್ಯೂ ಕಾನೂನಿಗೆ ಭಂಗವಾಗಬಾರದು ಎಂದು ಶಾಂತಿಯುತವಾಗಿ ರ್ಯಾಲಿಯನ್ನು ಯಶಸ್ಸುಗೊಳಿಸಿದ್ದೇವೆ ಎಂದರು.

ಪೊಲೀಸ್ ಅಧಿಕಾರಿಗಳು ತುಘಲಕ್ ಮಾದರಿಯ ನಿರ್ಧಾರ ಮಾಡಿದ್ದಾರೆ. ಒಂದೇ ಕಡೆ 5ಕ್ಕಿಂತ ಹೆಚ್ಚು ಬೈಕ್‌ಗಳಿದ್ದರೆ ಮೊಕದ್ದಮೆ ಹೂಡುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದಾಗ್ಯೂ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವವರೆಗೆ ಹೋರಾಟ ಮಾಡಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಈ ಸಂದರ್ಭ ಬಿಲ್ಲವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಅವಿನಾಶ್ ಸುವರ್ಣ, ರಾಜಶೇಖರ್ ಕೋಟ್ಯಾನ್, ಅಕ್ಷಿತ್ ಸುವರ್ಣ, ಚಿತ್ತರಂಜನ್, ಪ್ರತಿಭಾ ಕುಳಾಯಿ ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News