ಬಿಜೆಪಿ ಕಾರ್ಫೋರೇಟ್ ಸಂಸ್ಥೆಗಳಿಗೆ ಮಾರಾಟವಾಗಿದೆ: ಸುರೇಶ್ ಕಲ್ಲಾಗರ್

Update: 2020-12-08 14:58 GMT

ಕುಂದಾಪುರ, ಡಿ.8: ರೈತರು ಕಳೆದ 12 ದಿನಗಳಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದರೂ ಕೇಂದ್ರ ಸರಕಾರ ನೂತನ ಮೂರು ಕೃಷಿ ಮಸೂದೆ ಗಳನ್ನು ವಾಪಾಸ್ಸು ಪಡೆಯದಿರಲು ಬಿಜೆಪಿ ಪಕ್ಷ ಸಂಪೂರ್ಣವಾಗಿ ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿದೆ ಮತ್ತು ಮಾರಾಟ ವಾಗಿರುವು ದಕ್ಕೆ ಸ್ಪಷ್ಟ ನಿರ್ದಶನ ವಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.

ರೈತರ ಭಾರತ್ ಬಂದ್ ಬೆಂಬಲಿಸಿ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಇಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಈ ಹಿಂದಿನ ಎಪಿಎಂಸಿ ಕಾಯ್ದೆಯನ್ನು ಕೇಂದ್ರ ಸರಕಾರ ಬಲಗೊಳಿಸಿ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬದಲು ರೈತರನ್ನು ನಾಶ ವಾಡಲು ಹೊರಟಿದೆ ಎಂದು ದೂರಿದರು.

ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಮಾತನಾಡಿ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭಮಾಡಿಕೊಳ್ಳಲು ಅನುಕೂಲವಾಗಿದೆ. ಆಹಾರ ವಸ್ತುಗಳನ್ನು ಈ ಸಂಸ್ಥೆಗಳು ವಿಪರೀತ ದಾಸ್ತಾನು ಮಾಡಿ ಆಹಾರದ ಕೃತಕ ಅಭಾವ ಸೃಷ್ಠಿಯಾಗಿ ದಿನಗೂಲಿ ಯಾಗಿ ದುಡಿಯುವವರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ವಿದ್ಯುತ್ ಶಕ್ತಿ ಕಾಯ್ದೆ 2020 ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವುದು ರೈತರಿಗೆ ಸಬ್ಸಿಡಿ, ಕುಟೀರ ಜ್ಯೋತಿ, ಭಾಗ್ಯ ಜ್ಯೋತಿಗಳು ಮಾಯವಾಗಲಿದೆ. ಇಂತಹ ಜನಸಾಮಾನ್ಯರ ಪರವಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ಅಪಪ್ರಚಾರ, ದೌರ್ಜನ್ಯ ನಡೆಸುವುದರ ಮೂಲಕ ಪ್ರಜಾ ಪ್ರಭುತ್ವವನ್ನೇ ಹತ್ತಿಕ್ಕಲು ಕೇಂದ್ರ ಸರಕಾರ ಹೊರಟಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಮಹಾಬಲವಡೇರ ಹೋಬಳಿ, ಸಿಐಟಿಯು ಮುಖಂಡ ರಾದ ಸಂತೋಷ ಹೆಮ್ಮಾಡಿ, ಬಲ್ಕೀಸ್, ಸುಶೀಲ ನಾಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News