ಆಲೋಪತಿ ವೈದ್ಯರಿಂದ ಮುಷ್ಕರ: ಡಿ.11ರಂದು ಓಪಿಡಿ ಸೇವೆಗಳು ಸ್ಥಗಿತ
ಉಡುಪಿ, ಡಿ.9: ಆಯುರ್ವೆದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು ಎಂಬುದಾಗಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಆಲೋಪತಿ ವೈದ್ಯರು, ಡಿ.11ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ.
ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‌ನ ಇತ್ತೀಚಿನ ನಡೆಯಿಂದಾಗಿ ಇಡೀ ದೇಶದ ಆಧುನಿಕ ವೈದ್ಯಕೀಯ ವೃತ್ತಿ ಸಂಕಷ್ಟಕ್ಕೆ ಸಿಲುಕಿದೆ. ಆದುದರಿಂದ ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸಿನಂತೆ ಎಲ್ಲ ಶಸ್ತ್ರಚಿಕಿತ್ಸೆಗಳು ಆಧುನಿಕ ವೈದ್ಯಕೀಯ ಶಾಸ್ತ್ರದ ಪರಿಮಿತಿಯೊಳಗೆ ಬರುತ್ತವೆ. ಆದುದರಿಂದ ಈ ಎಲ್ಲ ಶಸ್ತ್ರ ಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಸೇರಿಸಬಹುದೆಂಬುದು ಆಯುಷ್ ಸಚಿವಾಲಯದ ವಿಚಿತ್ರ ಸ್ಪಷ್ಟನೆಯಾಗಿದೆ. ಆದರೆ ವೈದ್ಯಕೀಯ ವ್ಯವಸ್ಥೆಗಳನ್ನು ಮಿಶ್ರಗೊಳಿಸುವುದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದು ಕೇವಲ ವೃತ್ತಿಯ ವಿಷಯವಲ್ಲ. ಇದು ಆರೋಗ್ಯ ರಕ್ಷಣಾ ಮತ್ತು ವಿತರಣಾ ವ್ಯವಸ್ಥೆಯ ಮೇಲೆ ಗಂಭೀರವಾದ ದುಷ್ಪರಿಣಾಮಗಳನ್ನು ಉಂಟು ಮಾಡಬಲ್ಲದು. ಅಲ್ಲದೆ, ರೋಗಿಗಳ ಆರೋಗ್ಯ ರಕ್ಷಣೆಯ ಮಾಪನ ಬದಲಾಗಲಿದೆ. ಈ ಅಧಿಸೂಚನೆಯಿಂದಾಗಿ ತಮಗೆ ಇಷ್ಟವಾದ ಔಷಧ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ರೋಗಿಯ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಎಲ್ಲ ವ್ಯವಸ್ಥೆಗಳನ್ನು ಮಿಶ್ರಗೊಳಿಸುವ ಅರ್ಥಹೀನ ಪ್ರಯತ್ನದಲ್ಲಿ ಆಯುಶ್ ಸಚಿವಾಲಯದ ಖಾಲಿ ಪದಗಳು ಭಾರತೀಯ ವೈದ್ಯ ಪದ್ಧತಿಗಳ ಸತ್ಯಾಸತ್ಯತೆಯನ್ನು ಕಾಪಾಡಲು ವಿಫಲವಾಗಿವೆ. ವ್ಯವಸೆಗಳ ಮಿಶ್ರಣವು ಪ್ರತಿ ಯೊಂದು ವ್ಯವಸ್ಥೆಯನ್ನು ಟೊಳ್ಳಾಗಿಸುತ್ತದೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಎಲ್ಲ ವೈದ್ಯಕೀಯ ಪದ್ಧತಿಗಳನ್ನು ಒಂದುಗೂಡಿಸುವ ಆಯೋಗದ ಪ್ರಯತ್ನಗಳು ಅಪರಾಧಗಳೆನಿಸುತ್ತವೆ. ಇಂತಹ ನಿರ್ಲಕ್ಷಾತ್ಮಕ ನಿರ್ಧಾರಗಳಿಂದ ಉದ್ಭವಿಸುವ ಸಮಸ್ಯೆಗಳು ರೋಗಿಯ ಆರೈಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ದೂರಿದ್ದಾರೆ.
ಅಸ್ತಿತ್ವ ಮತ್ತು ಅಸ್ಮಿತೆಗಾಗಿ ದೀರ್ಘಕಾಲೀನ ಹೋರಾಟಕ್ಕಾಗಿ ಭಾರತೀಯ ವೈದ್ಯಕೀಯ ಸಂಘ ಸಿದ್ಧವಾಗಿದೆ. ಎಲ್ಲ ವೈದ್ಯರು ಹಾಗೂ ಭ್ರಾತೃತ್ಯದ ಸಂಘಟನೆ ಗಳು ಈ ದುರುದ್ದೇಶಪೂರಿತ ನಿರ್ಣಯಗಳನ್ನು ಪ್ರತಿರೋಧಿಸಲು ಸಂಕಲ್ಪ ತೊಟ್ಟಿವೆ. ಯಾಕೆಂದರೆ ಇಡೀ ದೇಶದ ಜನರ ಆರೋಗ್ಯ ಈಗ ಗಂಡಾಂತರ ದಲಿದೆ ಎಂದು ಅವರು ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.