ವಿವಿಧ ಇಲಾಖೆಗಳಿಂದ ಇನ್ನಷ್ಟು ಅಂಕಿ ಅಂಶ, ದಾಖಲೆಗಳ ಸಂಗ್ರಹ : ಯುಪಿಸಿಎಲ್ ಸ್ಥಾವರಕ್ಕೆ ಭೇಟಿ ನೀಡಿದ ತಜ್ಞರ ಸಮಿತಿ

Update: 2020-12-09 15:12 GMT

ಉಡುಪಿ, ಡಿ. 9: ಪಡುಬಿದ್ರಿ ಸಮೀಪದ ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗೌತಮ್ ಅದಾನಿ ಮಾಲಕತ್ವದ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರದಲ್ಲಿ 2010ರಿಂದ ಆಗಿರುವ ಸಮಗ್ರ ಹಾನಿಯ ಅಂದಾಜು ಮಾಡಲು ರಾಷ್ಟ್ರೀಯ ಹಸಿರು ಪೀಠದ ನಿರ್ದೇಶನದಂತೆ ರಚಿತವಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಮೂರನೇ ದಿನವಾದ ಇಂದು ಯುಪಿಸಿಎಲ್ ಸ್ಥಾವರಕ್ಕೆ ಭೇಟಿ ನೀಡಿ ಮಾಹಿತಿಗಳನ್ನು ಕಲೆ ಹಾಕಿತು.

ಯುಪಿಸಿಎಲ್‌ನ ಕಾರ್ಯವಿಧಾನ, ಮಾಲಿನ್ಯ ನಿಯಂತ್ರಣಕ್ಕೆ ಕಂಪೆನಿ ತೆಗೆದು ಕೊಂಡಿರುವ ಕ್ರಮಗಳು, ಕಲ್ಲಿದ್ದಲು, ಉಪ್ಪು ನೀರಿನ ನಿರ್ವಹಣೆಯ ವಿಧಾನಗಳ ಕುರಿತು ಕಂಪೆನಿಯ ಅಧಿಕಾರಿಗಳಿಂದ ವಿವರಗಳನ್ನು ಪಡೆದ ಸಮಿತಿಯ ಸದಸ್ಯರು, ಸ್ಥಾವರ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಬಗ್ಗೆ ಅವರ ವಿವರಣೆಯನ್ನು ಆಲಿಸಿದೆ ಎಂದು ತಜ್ಞರ ಸಮಿತಿಯ ನೇತೃತ್ವ ವಹಿಸಿರುವ ಸಿಪಿಸಿಬಿಯ ಪ್ರಾದೇಶಿಕ ಹೆಚ್ಚುವರಿ ನಿರ್ದೇಶಕ ಜಿ.ತಿರುಮೂರ್ತಿ ‘ವಾರ್ತಾಭಾರತಿ’ಗೆ ತಿಳಿಸಿದರು.

ಮೂರು ದಿನಗಳ ಉಡುಪಿ ಜಿಲ್ಲಾ ಭೇಟಿಯನ್ನು ಮುಗಿಸುವ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ಮತ್ತೊಮ್ಮೆ ಭೇಟಿ ನೀಡಿ ಕೃಷಿ, ತೋಟಗಾರಿಕೆ, ಆರೋಗ್ಯ, ಪಶುಸಂಗೋಪನೆ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಯಿತು ಎಂದ ಅವರು, ಯುಪಿಸಿಎಲ್‌ಗೆ ಸಂಬಂಧಿಸಿದಂತೆ 2008ರಿಂದ ಇಲಾಖೆಗಳ ಬಳಿ ಇರುವ ಇನ್ನಷ್ಟು ಮಾಹಿತಿ ಹಾಗೂ ಅಂಕಿಅಂಶಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.

ಪೆಬ್ರವರಿಯಲ್ಲಿ ವರದಿ ಸಲ್ಲಿಕೆ: ಮುಂದಿನ ಫೆಬ್ರವರಿ ಮೊದಲ ವಾರದೊಳಗೆ ವರದಿ ಸಲ್ಲಿಸುವಂತೆ ಹಸಿರು ಪೀಠ ನಿರ್ದೇಶಿಸಿದ್ದು, ವಿವಿಧ ಇಲಾಖೆ ಗಳಿಂದ ಈಗ ಕೇಳಿರುವ ಡಾಟಾ (ಅಂಕಿಅಂಶ, ಮಾಹಿತಿ) ಸಕಾಲದಲ್ಲಿ ಸಿಗದಿದ್ದರೆ, ಹೆಚ್ಚಿನ ಕಾಲಾವಕಾಶ ಕೇಳಾಗುವುದು ಎಂದವರು ನುಡಿದರು.

ಇಂದು ಯುಪಿಸಿಎಲ್ ಸ್ಥಾವರಕ್ಕೆ ಭೇಟಿ ನೀಡಿ ಅಲ್ಲಿಂದ ಸಮಗ್ರ ವಿವರ ಸಂಗ್ರಹಿಸಲಾಗಿದೆ. ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ ಎಂದು ಜಿ.ತಿರುಮೂರ್ತಿ, ನಿನ್ನೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿದಾಗ ಸಂತ್ರಸ್ಥ ಜನರ ಅಹವಾಲುಗಳನ್ನು ಆಲಿಸಲಾಗಿದೆ. 2008ರಿಂದ ಈವರೆಗೆ ಅವರಿಗಾದ ಹಾನಿಯ ಪ್ರಮಾಣವನ್ನು ಕೇಳಿದ್ದೇವೆ. ಅವುಗಳನ್ನು ಇಲಾಖೆಗಳ ಬಳಿ ಇರುವ ಅಧಿಕೃತ ಅಂಕಿಅಂಶಗಳೊಂದಿಗೆ ಹೋಲಿಸಿ ನೋಡಬೇಕಾಗಿದೆ ಎಂದರು.

ಅಂತರ್ಜಲದ ಬಗ್ಗೆ ಮಾಹಿತಿ: ಇಂದು ಜಿಲ್ಲಾಧಿಕಾರಿಗಳೊಂದಿಗೆ ಭೇಟಿಯ ವೇಳೆ ಈ ಪರಿಸರದ ಅಂತರ್ಜಲದ ಕುರಿತಂತೆ ಮಾಹಿತಿಯನ್ನು ನೀಡುವಂತೆ ಕೇಳಿದ್ದೇವೆ. ಅದೇ ರೀತಿ ಯೋಜನಾ ಪ್ರದೇಶದ 10ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ 2008ರಿಂದ ಭತ್ತ, ಅಡಿಕೆ, ತೆಂಗು ಹಾಗೂ ಇತರ ತೋಟಗಾರಿಕಾ ಬೆಳೆಗಳ ಇಳುವರಿಯಲ್ಲಿ ಉಂಟಾದ ಕುಸಿತದ ಪ್ರಮಾಣವನ್ನೂ ಅಂದಾಜಿಸಬೇಕಿದೆ. ಜನಸಾಮಾನ್ಯರ ಆರೋಗ್ಯ ಸ್ಥಿತಿ ಯಲ್ಲಾದ ಮಾರ್ಪಾಡುಗಳನ್ನು ಸಹ ಪರಿಶೀಲಿಸಬೇಕಿದೆ ಎಂದು ಅವರು ವಿವರಿಸಿದರು.

2015ರಿಂದ ಮಾಲಿನ್ಯ ಕಡಿಮೆ: ಪರಿಸರದ ಗ್ರಾಪಂಗಳಿಗೂ ಭೇಟಿ ನೀಡಿ ಅಲ್ಲಿಂದಲೂ ಬೇಕಾದ ಮಾಹಿತಿ, ಅಂಕಿಅಂಶಗಳನ್ನು ಪಡೆದಿದ್ದು, ಇನ್ನ ಷ್ಟನ್ನು ನೀಡುವಂತೆ ಕೇಳಿದ್ದೇವೆ. ಸಮಿತಿಯ ಗಮನಕ್ಕೆ ಬಂದಂತೆ 2008ರಿಂದ 2015ರವರೆಗೆ ಅಂದರೆ ನಾಗಾರ್ಜುನ ಹಾಗೂ ಲ್ಯಾಂಕೋ ಕಂಪೆನಿಗಳು ಸ್ಥಾವರವನ್ನು ನಡೆಸುತಿದ್ದಾಗ ಇಲ್ಲಿ ವಿವಿಧ ರೀತಿಯ ಮಾಲಿನ್ಯ ಕಂಡುಬಂದಿದ್ದು ಹಾಗೂ ಪರಿಸರ ಹಾನಿ ಅಗಾಧ ಪ್ರಮಾಣದಲ್ಲಿತ್ತು. ಇದನ್ನು ಇಲಾಖೆಗಳೂ ಒಪ್ಪಿಕೊಂಡಿವೆ.

ಸಂತ್ರಸ್ಥ ಜನರನ್ನು ಈ ಬಗ್ಗೆ ವಿಚಾರಿಸಿದಾಗ 2015ರ ಬಳಿಕ ಅಂದರೆ ಅದಾನಿ ಕಂಪೆನಿ ಯುಪಿಸಿಎಲ್‌ನ ಒಡೆತನ ಪಡೆದ ಬಳಿಕ ಮಾಲಿನ್ಯ ಹಾಗೂ ಹಾನಿಗಳು ನಿಯಂತ್ರಣಕ್ಕೆ ಬಂದಿವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಸ್ಥಾವರದ ಭೇಟಿಯಲ್ಲಿ ಕಂಡಂತೆ, ಈಗ ಮಾಲಿನ್ಯ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕಂಪೆನಿ ಕೈಗೊಂಡಿರುವುದು ಕಂಡುಬರುತ್ತದೆ ಎಂದು ತಿರುಮೂರ್ತಿ ತಿಳಿಸಿದರು.

 ಎನ್‌ಜಿಟಿಯ ಆದೇಶದಂತೆ ನಾವು 2008-10ರಿಂದ ಈವರೆಗೆ ಆಗಿರುವ ಹಾನಿಯ ಪ್ರಮಾಣವನ್ನು ಜನರು ನೀಡಿದ ಮಾಹಿತಿ ಹಾಗೂ ನಾವು ಸಂಗ್ರಹಿಸಿದ ಅಧಿಕೃತ ಡಾಟಾಗಳ ಮೂಲಕ ಅಂದಾಜಿಸಿ ವರದಿ ನೀಡುತ್ತೇವೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News