ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಮಂಗಳೂರಿನ ಪುಟಾಣಿ ಆ್ಯರನ್ ಆಯ್ಕೆ

Update: 2020-12-11 05:52 GMT

ಮಂಗಳೂರು, ಡಿ.11: ನಗರದ ಚೆಸ್ ಪುಟಾಣಿ ಪ್ರತಿಭೆ ಆ್ಯರನ್ ರೀವ್ ಮೆಂಡಿಸ್ ಅವರು ಫಿಡೆ ಆನ್‌ಲೈನ್ ವರ್ಲ್ಡ್ ಅಂಡರ್ 10 ರ್ಯಾಪಿಡ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 2ರಿಂದ 4ರ ವರೆಗೆ ಜರುಗಿದ ಅಮೆರಿಕನ್ ಕಾಂಟಿನೆಂಟಲ್ ಫಿಡೆ ಆನ್‌ಲೈನ್ ವರ್ಲ್ಡ್ ಅಂಡರ್ 10 ರ್ಯಾಪಿಡ್ ಚೆಸ್ ಚಾಂಪಿಯನ್ ‌ಶಿಪ್‌ನಲ್ಲಿ ಎರಡನೇ ಸ್ಥಾನಿಯಾಗುವ ಮೂಲಕ ಅವರು ಈ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿಕೊಂಡರು.

8 ವರ್ಷದ ಆ್ಯರನ್ ವಿಶ್ವದಾದ್ಯಂತ 8 ಪ್ರಮುಖ ವಿಶ್ವ ಚೆಸ್‌ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅರ್ಹತೆ ಪಡೆದಿದ್ದರೂ ಕೋವಿಡ್ ಕಾರಣದಿಂದ ಅವುಗಳು ರದ್ದಾಗಿದ್ದವು. ಇದೀಗ ಅಮೆರಿಕನ್ ಸೆಲೆಕ್ಷನ್ ಚಾಂಪಿಯನ್‌ಶಿಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡ ಅವರು ಅಂಡರ್10 ಕೆಟಗರಿಯಲ್ಲಿ ಕೆನಡಾವನ್ನು ಪ್ರತಿನಿಧಿಸುತ್ತಿರುವ ಏಕೈಕ ಬಾಲಕ.

ಮಂಗಳೂರಿನ ಡೆರಿಕ್ ಚೆಸ್ ಸ್ಕೂಲ್‌ನಲ್ಲಿ ಡೆರಿಕ್ ಪಿಂಟೊ ಹಾಗೂ ಪ್ರಸನ್ನ ರಾವ್ ಅವರಿಂದ 5ರ ಬಾಲಕನಿರುವಾಗಲೇ ತರಬೇತಿ ಪಡೆದ ಆ್ಯರನ್ ಪ್ರಸ್ತುತ ಹೆರ್‌ಮನ್ ಸಲ್ದಾನಾ ಹಾಗೂ ಶರಣ್ ರಾವ್ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಡಿ.19ರಿಂದ 22ರ ವರೆಗೆ ನಡೆಯುವ ಫಿಡೆ ಆನ್‌ಲೈನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಅಗ್ರ 16 ಆಟಗಾರರಷ್ಟೇ ಪಾಲ್ಗೊಳ್ಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News