ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ : ಪಿಎಫ್‌ಐ ಪ್ರತಿಭಟನೆ

Update: 2020-12-11 10:38 GMT

ಮಂಗಳೂರು, ಡಿ. 11: ಆಡಳಿತರೂಢ ಬಿಜೆಪಿ ಸರಕಾರವು ಈಡಿ ಸೇರಿದಂತೆ ಸರಕಾರಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪಿಎಫ್‌ಐ ಕಾರ್ಯಕರ್ತರ ಬೇಟೆಯಾಡುತ್ತಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ನಗರದ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್‌ಐನ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾದ ತನಿಖಾ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಾಗಿ ವರ್ತಿುತ್ತಿರುವುದು ಅಪಾಯಕಾರಿ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈಡಿ ಅತ್ಯಂತ ಕನಿಷ್ಠ ಹಣಕಾಸಿನ ಮೂಲ ಮತ್ತು ವ್ಯವಹಾರಗಳನ್ನು ಹೊಂದಿರುವ ಗುಂಪುಗಳ ಹಿಂದೆ ಓಡುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿಯ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಪೊರೇಟ್‌ಗಳು, ರಾಜಕೀಯ ವ್ಯಕ್ತಿಗಳು ಹಾಗೂ ಎನ್‌ಜಿಒಗಳನ್ನು ಈಡಿ ದಾಳಿ ನಡೆಸುವುದಾಗಲಿ ತನಿಖೆ ಮಾಡುವುದಾಗಲಿ ಮಾಡುತ್ತಿಲ್ಲ. ಬದಲಾಗಿ ಬಿಜೆಪಿಯ ಜನವಿರೋಧಿ ಸಿದ್ಧಾಂತದ ವಿರುದ್ಧ ರಾಜಿಯಿಲ್ಲದ ಕಾರಣಕ್ಕಾಗಿ ಪಿಎಫ್‌ಐನ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸಮಿತಿ ಸದಸ್ಯ ಅಶ್ರಫ್ ಎ.ಕೆ. ಮಾತನಾಡಿ, ಈಡಿ ಹಾಗೂ ತನಿಖಾ ಸಂಸ್ಥೆಗಳು ಭಾರತೀಯ ಸಂವಿಧಾನ ಹಾಗೂ ಕಾನೂನಿಗೆ ತಲೆಬಾಗಿ ಕೆಲಸ ಮಾಡುವ ಮೂಲಕ ತಮ್ಮ ಘನತೆಯನ್ನು ಉಳಿಸಿಕೊಳ್ಳಬೇಕು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಮೇಯರ್ ಕೆ. ಅಶ್ರಫ್, ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮೊದಲಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News