ವೆನ್ಝ್ ಅಬ್ದುಲ್ ಅಝೀಝ್ ಕೊಲೆಯತ್ನ ಪ್ರಕರಣ : ಆರೋಪಿಗಳ ಬಂಧನ ವಿಳಂಬ ಖಂಡಿಸಿ ಪ್ರತಿಭಟನೆ

Update: 2020-12-11 11:36 GMT

ಮಂಗಳೂರು :  ಬಜ್ಪೆಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಬಳಿ ಉದ್ಯಮಿ, ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ನಾಯಕ ಕಂದಾವರ ಕೈಕಂಬದ ವೆನ್ಝ್ ಅಬ್ದುಲ್ ಅಝೀಝ್ ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ ವಿಳಂಬ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕೈಕಂಬ ಇದರ ವತಿಯಿಂದ ಶುಕ್ರವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಎಸ್‌ವೈಎಸ್ ರಾಜ್ಯ ನಾಯಕ ಅಶ್ರಫ್ ಕಿನಾರ ಅವರು ವೆನ್ಝ್ ಅಬ್ದುಲ್ ಅಝೀಝ್ ಅವರನ್ನು ನ.15ರಂದು ರಾತ್ರಿ ಕೊಲೆಯತ್ನ ಮಾಡಲಾಗಿದೆ. ಆ ಬಳಿಕ ಅವರು ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯ ಬಳಿಯಿದ್ದ ಅವರ ಅಳಿಯ ನೌಶಾದ್‌ರ ಕೊಲೆಯತ್ನವೂ ನಡೆದಿದೆ. ಪ್ರಕರಣದ ಬಗ್ಗೆ ಶಂಕಿತರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು ಮೀನಮೇಷ ಮಾಡುತ್ತಿದ್ದಾರೆ. ಇದು ಖಂಡನೀಯ. ಹಾಗಾಗಿ ಪೊಲೀಸ್ ಇಲಾಖೆಯು ತಕ್ಷಣ ಆರೋಪಿ ಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ವೈಎಸ್ ರಾಜ್ಯನಾಯಕರಾದ ಜಿಎಂ ಕಾಮಿಲ್ ಸಖಾಫಿ, ಯಾಕೂಬ್ ಸಅದಿ ನಾವೂರು, ಮುನೀರ್ ಸಖಾಫಿ, ಅಲಿ ತುರ್ಕಳಿಕೆ, ಇಬ್ರಾಹಿಂ ಸಖಾಫಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News