ಜೆಮಿನಿಡ್ ಉಲ್ಕಾವೃಷ್ಟಿ : ಡಿ.13,14ರಂದು ಗಂಟೆಗೆ 120 ಉಲ್ಕೆಗಳು ಗೋಚರ !

Update: 2020-12-11 14:04 GMT

ಉಡುಪಿ, ಡಿ.11: ಕುತೂಹಲಕಾರಿ ವಿದ್ಯಮಾನವಾಗಿರುವ ಜೆಮಿನಿಡ್ ಉಲ್ಕಾವೃಷ್ಟಿಯನ್ನು ವೀಕ್ಷಿಸುವವರಿಗೆ ಗಂಟೆಗೆ ಸುಮಾರು 120 ಉಲ್ಕೆಗಳು ಗೋಚರಿಸುತ್ತವೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತದ ವಿಸ್ಮಯವನ್ನು ತಪ್ಪದೆ ವೀಕ್ಷಿಸ ಬೇಕು. ಡಿ.13 ಅಥವಾ 14ರಂದು ಈ ವಿದ್ಯಾ ಮಾನದ ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಅತೀ ಸೂಕ್ತವಾದುದು ಎಂದು ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತುವಾಗ, ಈ ಕಕ್ಷೆಯ ಕೆಲವೊಂದು ಭಾಗಗಳಲ್ಲಿ ಯಾವುದಾದರೂ ಧೂಮಕೇತು ಹಾದು ಹೋಗಿದ್ದರೆ, ಉಲ್ಕಾವೃಷ್ಟಿಯು ಉಂಟಾಗಬಹುದು. ಹಿಮದ ಉಂಡೆಯಾಗಿರುವ ಧೂಮ ಕೇತು ಸೂರ್ಯನನ್ನು ಸಮೀಪಿ ಸುತ್ತಿದ್ದಂತೆ ಆವಿಯಾಗುತ್ತ ಬರುತ್ತದೆ. ಈ ಧೂಮಕೇತು ಸೂರ್ಯನ ಸುತ್ತ ಹಾದು ಹೋಗುತ್ತಿದ್ದಂತೆ ಅದರ ಪಥದಲ್ಲಿ ಹಲವಾರು ಅವಶೇಷಗಳು ಉಳಿದುಕೊಳ್ಳುತ್ತವೆ.

ಭೂಮಿಯು ತನ್ನ ಕಕ್ಷೆಯಲ್ಲಿ ಸುತ್ತುತಿರುವಾಗ ಈ ಅವಶೇಷಗಳ ಪ್ರದೇಶವನ್ನು ತಲುಪುತ್ತಿದ್ದಂತೆ ಅವುಗಳು ಧೂಮಕೇತುಗಳಾಗಿ ಭೂಮಿಯ ವಾತಾವರಣದಲ್ಲಿ ಸೃಷ್ಟಿಯಾಗುತ್ತವೆ. ಭೂಮಿಯು ಈ ಪ್ರದೇಶವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗು ವುದರಿಂದ ಪ್ರತೀವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿ ಯಾಗುತ್ತದೆ. ಉದಾಹರಣೆಗೆ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಭೂಮಿ ಟೆಂಪಲ್-ಟಟ್ಟಲ್ ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹ ರಾಶಿಯಿಂದ ಲಿಯೊನಿಡ್ ಉಲ್ಕಾವೃಷ್ಟಿಯು ಗೋಚರಿಸುತ್ತದೆ.

ಆದರೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾ ವೃಷ್ಟಿಯು 3200 ಫೆಥನ್ ಎಂಬ ಒಂದು ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ ಹೊರತು ಧೂಮಕೇತುವಿನ ಕಾರಣದಿಂದಲ್ಲ. ಡಿ.13 ಅಥವಾ 14ರಂದು ಸಂಜೆ ಸುಮಾರು 8.30ರ ಹೊತ್ತಿಗೆ ಪೂರ್ವ-ಕ್ಷಿತಿಜದಿಂದ ಮಿಥುನ ರಾಶಿಯು ಉದಯವಾಗುತ್ತದೆ. ಇದೆ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿಯನ್ನು ಗುರುತಿಸಬಹುದು. ಈ ವಿಜಯಸಾರಥಿ ನಕ್ಷತ್ರ ಪುಂಜದಲ್ಲಿ ಅತೀ ಪ್ರಕಾಶಮಾನ ವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಇದರ ಕೆಳಗಡೆ ಮಿಥುನ ರಾಶಿಯ ಪುನರ್ವಸು ನಕ್ಷತ್ರ(ಕ್ಯಾಸ್ಟರ್ ಹಾಗು ಪೋಲಕ್ಸ್‌ಗಳ ಜೋಡಿ)ವನ್ನು ಗುರುತಿಸಬಹುದು. ಮಿಥುನ ರಾಶಿಯನ್ನು, ಕ್ಯಾಸ್ಟರ್ ಮತ್ತು ಪೋಲಕ್ಗಳ ದೇಹಗಳಂತೆ ಕಲ್ಪಿಸಿಕೊಳ್ಳಬಹುದು. ಪುನರ್ವಸುವಿನಲ್ಲಿ ಮೇಲ್ಭಾಗದಲ್ಲಿರುವ ನಕ್ಷತ್ರವು ಕ್ಯಾಸ್ಟರ್ ಆಗಿರುತ್ತದೆ.

ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸುವುದನ್ನು ರಾತ್ರಿ 8.30ರಿಂದ ಸೂರ್ಯೋದಯದವರೆಗೆ ಕಾಣಬ ಹುದು. ಅದರಲ್ಲೂ ಇದನ್ನು ವೀಕ್ಷಿಸಲು ಇನ್ನೂ ಸೂಕ್ತವಾದ ಸಮಯ ರಾತ್ರಿ 1 ಗಂಟೆಯಿಂದ ಮುಂಜಾನೆ 4 ಗಂಟೆಯ ವರೆಗಿನ ಅವಧಿ. ಯಾಕೆಂದರೆ ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ತುಂಬಾ ಮೇಲೆ ಕಾಣುವುದರಿಂದ ಈ ಸಮಯದಲ್ಲಿ ಉಲ್ಕೆ ಗಳನ್ನು ವೀಕ್ಷಿಸಿ ಹೆಚ್ಚು ಆನಂದಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News