ಪ್ರಚೋದನಕಾರಿ ಗೋಡೆ ಬರಹ ಪ್ರಕರಣ : ಮತ್ತೋರ್ವನ ಬಂಧನ

Update: 2020-12-11 15:35 GMT
ಫೈಲ್ ಫೋಟೊ 

ಮಂಗಳೂರು, ಡಿ.11: ನಗರದ ಬಿಜೈ ಮತ್ತು ಕೋರ್ಟ್ ಆವರಣದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಸಾದತ್ (50) ಬಂಧಿತ ಆರೋಪಿ. ಈತನನ್ನು ನಾಲ್ಕು ದಿನಗಳ ಹಿಂದೆಯೇ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಡಿ.5ರಂದು ತೀರ್ಥಹಳ್ಳಿ ನಿವಾಸಿಗಳಾದ ಮುಹಮ್ಮದ್ ಶಾರೀಕ್ (32), ಮಾಝ್ ಮುನೀರ್ ಅಹ್ಮದ್ (21) ಎಂಬವರನ್ನು ಬಂಧಿಸಲಾಗಿತ್ತು.

ಸಾದತ್ ಎಂಬಾತ ಮುಹಮ್ಮದ್ ಶಾರೀಕ್‌ನ ಚಿಕ್ಕಪ್ಪ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಆರೋಪಿಗಳಿಗೆ ಸಹಾಯ ಹಾಗೂ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಸಾದತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎರಡು ದಿನಗಳ ಕಾಲ ಕೋವಿಡ್ ಪರೀಕ್ಷೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಕೋವಿಡ್ ಪರೀಕ್ಷೆಯ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

ಆರೋಪಿಗಳಾದ ಮುಹಮ್ಮದ್ ಶಾರೀಕ್ ಹಾಗು ಮಾಝ್ ಮುನೀರ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರನ್ನು ಎಸಿಪಿ ಜಗದೀಶ್ ನೇತೃತ್ವದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News