ಉಡುಪಿ: ಸಂತೆಕಟ್ಟೆ 'ರೋಬೋ ಸಾಫ್ಟ್'‌ನಲ್ಲಿ ಬೆಂಕಿ ಅವಘಡ

Update: 2020-12-12 07:06 GMT

ಉಡುಪಿ, ಡಿ.12: ಸಂತೆಕಟ್ಟೆಯ ಆಶೀವಾರ್ದ್ ಥಿಯೇಟರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೇ ಇರುವ ಸಾಫ್ಟ್‌ವೇರ್ ಕಂಪೆನಿ ‘ರೋಬೋ ಸಾಫ್ಟ್’ನಲ್ಲಿ ಡಿ.12ರ ನಸುಕಿನ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ರೋಬೋ ಸಾಫ್ಟ್‌ನ ಮೊದಲ ಮಹಡಿಯಲ್ಲಿ ಡಿ.11ರ ಮಧ್ಯರಾತ್ರಿ ವೇಳೆ ವಿದ್ಯುತ್ ಶಾರ್ಟ್ ‌ಸಕ್ಯೂಟ್‌ನಿಂದ ಬೆಂಕಿ ಕಾಣಿಸಿ ಕೊಂಡಿದ್ದು, 12.30ರ ಸುಮಾರಿಗೆ ಈ ಅವಘಡ ಬೆಳಕಿಗೆ ಬಂದಿದೆ. ಕೂಡಲೇ ಉಡುಪಿಯ ಅಗ್ನಿ ಶಾಮಕದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ತಿಪ್ಪೆಸ್ವಾಮಿ ನೇತೃತ್ವದಲ್ಲಿ 15 ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸಿ, ನಸುಕಿನ ವೇಳೆ 2 ಗಂಟೆಗೆ ಸಂಪೂರ್ಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಕಟ್ಟಡ ಇಡೀ ಹೊಗೆಯಿಂದ ತುಂಬಿಕೊಂಡಿರುವುದು ಕಂಡುಬಂತು. ಕೊರೋನ ಬಳಿಕ ಇಲ್ಲಿನ ಸಿಬ್ಬಂದಿಗಳು ವರ್ಕ್ ಫ್ರಂ ಹೋಮ್ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ರಾತ್ರಿ ಪಾಳಿಯಲ್ಲಿ ಯಾರು ಕೂಡ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಈ ಅವಘಡದಿಂದ ರೋಬೋ ಸಾಫ್ಟ್ ಒಳಗೆ ಇದ್ದ ಅನೇಕ ಕಂಪ್ಯೂಟರ್ ಹಾಗೂ ಇಂಟಿರಿಯರ್ ಮತ್ತು ಸರ್ವರ್ ರೂಮ್‌ಗೆ ಹಾನಿಯಾಗಿವೆ. ಇದರಿಂದ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ತಿಪ್ಪೆಸ್ವಾಮಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News