ಸಕಲ ಸರಕಾರಿ ಗೌರವಗಳೊಂದಿಗೆ ಡಾ.ಬನ್ನಂಜೆ ಗೋವಿಂದಾಚಾರ್ಯ ಅಂತ್ಯಕ್ರಿಯೆ

Update: 2020-12-13 13:56 GMT

ಉಡುಪಿ, ಡಿ.13: ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಅವರ ಅಂತ್ಯಕ್ರಿಯೆಯು ಅಂಬಲಪಾಡಿಯಲ್ಲಿರುವ ಅವರ ಸ್ವಗೃಹದ ತೋಟದಲ್ಲಿ ಇಂದು ಸಂಜೆ ಸಕಲ ಸರಕಾರಿ ಗೌವಗಳೊಂದಿಗೆ ನೆರವೇರಿಸಲಾಯಿತು.

ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನು ಹೊದಿಸಿ, ಪೊಲೀಸ್ ಗೌರವ ರಕ್ಷೆಯೊಂದಿಗೆ ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸುವುದರ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಬನ್ನಂಜೆಯ ಹಿರಿಯ ಮಗ ವಿನಯ ಭೂಷಣ ಆಚಾರ್ಯ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.

ಅಂತ್ಯಕ್ರಿಯೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಮುಖರಾದ ಜಿ.ಶಂಕರ್, ಪ್ರದೀಪ್ ಕುಮಾರ್ ಕಲ್ಕೂರ, ಉದಯ ಕುಮಾರ್ ಶೆಟ್ಟಿ ಮೊದಲಾದವರು ಹಾಜರಿದ್ದರು.

ಮೃತರ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಪರಿಚಯ

1936ರಲ್ಲಿ ಜನಿಸಿದ ಬನ್ನಂಜೆ ಗೋವಿಂದಾಚಾರ್ಯ, 1970ರ ಆರಂಭ ಕಾಲದಿಂದ ಸುಮಾರು ಮೂರು ದಶಕಗಳ ಕಾಲ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ, ಸಾಪ್ತಾಹಿಕ ವಿಭಾಗದ ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಮ್ಮ ಪ್ರಚಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದ ಇವರು, ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯ ಸಾಧಿಸಿದ್ದರು. ಇವರು ಉಡುಪಿ ಶ್ರೀಕೃಷ್ಣ ಮಠದ ಆಸ್ಥಾನ ವಿದ್ವಾನ್ ಆಗಿದ್ದರು.

150 ಕೃತಿಗಳ ರಚನೆ
ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡಿರುವ ಇವರು, ಕನ್ನಡ ಮತ್ತು ಸಂಸ್ಕೃತಗಳಲ್ಲಿ ಸುಮಾರು 150 ಕೃತಿಗಳನ್ನು ರಚಿಸಿದ್ದಾರೆ.

ಬಾಣಭಟ್ಟನ ಕಾದಂಬರಿ, ಕಾಳೀದಾಸನ ಶಾಕುಂತಲಾ, ಶೂದ್ರಕನ ಮೃಚ್ಛ ಕಟಿಕ ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಶ್ರೀಶ್ರೀ ತ್ರಿವಿಕ್ರಮಾ ಚಾರ್ಯದಾಸರ ಆನಂದಮಾಲಾ, ತ್ರಿವಿಕ್ರಮ ಪಂಡಿತರ ವಾಯು ಸ್ತುತಿ, ವಿಷ್ಣುಸ್ತುತಿ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಆರು ಉಪನಿಷತ್ತುಗಳಿಗೆ ಟೀಕೆಯನ್ನು ಬರೆದಿರುವ ಇವರು, ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ಯಮಕ ಭಾರತ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಅದೇ ರೀತಿ ಭಾಗವತ ತಾತ್ಪರ್ಯ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.

ಮಧ್ವಾಚಾರ್ಯರ ಮಾಧ್ವರಾಮಾಯಣ, ರಾಜರಾಜೇಶ್ವರಿ ಯತಿಗಳ ಮಂಗ ಲಾಷ್ಟಕ ಹಾಗೂ ಇತರ ಕೃತಿಗಳಿಗೆ ಕನ್ನಡದಲ್ಲಿ ಮರುಜನ್ಮ ನೀಡಿದ್ದಾರೆ. ಹೀಗೆ ಇವರು ಕೇವಲ ಸಂಸ್ಕೃತ ಭಾಷೆಯಲ್ಲಿ ಸುಮಾರು 30ಕ್ಕೂ ಅಧಿಕ ಬೃಹತ್ ಗ್ರಂಥ ಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯ 130ಕ್ಕೂ ಅಧಿಕ ಕೃತಿಗಳು ರಚಿಸಿದ್ದು, ಅದರಲ್ಲಿ ಸುಮಾರು 45 ಗ್ರಂಥಗಳು ಪ್ರಕಾಶನಕ್ಕೆ ಬಾಕಿ ಇವೆ.

ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈವರೆಗೆ ಸುಮಾರು 30000 ಗಂಟೆಗಳಷ್ಟು ಉಪನ್ಯಾಸ ಪ್ರವಚನಗೈದು ಲಕ್ಷಾಂತರ ಅಭಿಮಾನಿಳು, ಶಿಷ್ಯರನ್ನು ಸಂಪಾದಿಸಿದ್ದಾರೆ.

ಜಿ.ವಿ.ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ, ಶಂಕರಾಚಾರ್ಯ, ರಮಾಜ ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿರುವ ಇವರು, ನಟ ಡಾ.ವಿಷ್ಣುವಧನ್‌ರ್ಗೆ ಆಧ್ಯಾತ್ಮಿಕ ಗುರು ಆಗಿದ್ದರು.

ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ


ಉಡುಪಿ ಶ್ರೀಕೃಷ್ಣ ಮಠ, ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ, ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಹಲವು ಬಿರುದು ಪಡೆದುಕೊಂಡಿದ್ದಾರೆ.

2009ರಲ್ಲಿ ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಇವರು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಸ್ವೀಕರಿಸಿದ್ದರು. ಅದೇ ರೀತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1974ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಗೌರವ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಇವರಿಗೆ ಸಂದಿದೆ. 2008ರಲ್ಲಿ ಅಮೆರಿಕಾದ ಪ್ರಿನ್ಸ್ಟನ್‌ನಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಇವರು ಭಾಗಿಯಾಗಿದ್ದರು.

ಪತ್ರಕರ್ತ, ಸಾಹಿತಿ, ಸಂಶೋಧಕ, ಅನುವಾದಕ, ಭಾಷಾಂತರಕಾರ, ಭಾಷ್ಯಕಾರ, ಕವಿ, ಪ್ರವಚನಕಾರ, ಉಪನ್ಯಾಸಕ ಹೀಗೆ ಬಹುವಿಧವಾಗಿ ಕಳೆದ ಸುಮಾರು 65 ವರ್ಷಗಳಿಂದ ಇವರು ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿ ದ್ದಾರೆ. ಕಳೆದ ಒಂದು ಶತಮಾನದಿಂದ ಸಂಸ್ಕೃತ ಮತ್ತು ಕನ್ನಡದ ಸಮನ್ವಯದ ಕೊಂಡಿಯಾಗಿ ವಿಶಾಲ ಆಯಾಮದಲ್ಲಿ ಸಾಹಿತ್ಯದ ಸೇವೆ ಸಲ್ಲಿಸಿದ ಇವರ, ಅನೇಕ ಕೃತಿಗಳು ಸಂಸ್ಕೃತ ಭಾಷೆಯ ಅಧ್ಯಯನಾಸಕ್ತರಿಗೆ ಆಕರ ಗ್ರಂಥಗಳಾಗಿವೆ. ದೇಶ ವಿದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ಸಂಶೋಧನಾಸಕ್ತರು ಇವರ ಲ್ಲಿಗೆಬಂದು ಅಧ್ಯಯನಗೈದಿದ್ದಾರೆ.

ಪುತ್ರನ 12ನೆ ದಿನದ ಕಾರ್ಯದಲ್ಲಿ ಭಾಗಿಯಾಗಿ ಕೊನೆಯುಸಿರೆಳೆದರು
ಅಂಬಲಪಾಡಿಯ ಮನೆಯಲ್ಲಿ ಇಂದು ನಡೆದ ಇತ್ತೀಚೆಗೆ ನಿಧನರಾದ ತನ್ನ ಎರಡನೆ ಪುತ್ರ ವಿಜಯ ಭೂಷಣ ಆಚಾರ್ಯ ಅವರ 12ನೆ ದಿನದ ಧಾರ್ಮಿಕ ಕಾರ್ಯದಲ್ಲಿ ಪೂರ್ಣವಾಗಿ ಭಾಗಿಯಾಗಿದ್ದ ಬನ್ನಂಜೆ ಗೋವಿಂದಾಚಾರ್ಯ, ಬಳಿಕ ಕೊನೆಯುಸಿರೆಳೆದರು.
‘ತಂದೆಯವರು ನಾಲ್ಕು ದಿನಗಳ ಹಿಂದೆ ಸ್ವಲ್ಪ ಅನಾರೋಗ್ಯ ಪೀಡಿತರಾಗಿ ದ್ದರು. ತಮ್ಮ ವಿಜಯ ಭೂಷಣ ತೀರಿ ಹೋಗಿ ಇಂದಿಗೆ 12ನೆ ದಿನ. ಇಂದು ಮನೆಯಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಪುತ್ರ ಶೋಕದಿಂದ ನಾಲ್ಕು ದಿನಗಳಿಂದ ತುಂಬಾ ಕೊರಗುತ್ತಿದ್ದ ಅವರು, ಕಳೆದ ಎರಡು ದಿನ ಇಡೀ ರಾತ್ರಿ ನಿದ್ದೆ ಮಾಡಿಲ್ಲ' ಎಂದು ಗೋವಿಂದಾಚಾರ್ಯರ ಹಿರಿಯ ಪುತ್ರ ವಿನಯ ಭೂಷಣ ಆಚಾರ್ಯ ತಿಳಿಸಿದ್ದಾರೆ.

‘ಇಂದು ಬೆಳಗ್ಗೆ ಸ್ವಲ್ಪ ಬಾಧೆಯಿಂದ ನರಳುತ್ತಿದ್ದರು. ಅದಕ್ಕಾಗಿ ವೈದ್ಯರ ಸಲಹೆ ಪಡೆದು, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ತರಿಸುವಷ್ಟರಲ್ಲಿ ಅವರು ನಮ್ಮನ್ನು ಬಿಟ್ಟು ಹೋದರು. ತಮ್ಮನ 12ನೆ ದಿನದ ಧಾರ್ಮಿಕ ಕಾರ್ಯಕ್ರಮ ಸಂಪೂರ್ಣ ಮುಗಿಯುವವರೆಗೆ ಇದ್ದರು. ಎಲೆ ಹೊರಗಿಡುವ ಕಾರ್ಯಕ್ರಮ ಮುಗಿದ 10 ನಿಮಿಷದಲ್ಲಿ ಅವರು ತನ್ನ ಪಯಣವನ್ನು ಮುಗಿಸಿದ್ದಾರೆ’ ಎಂದು ಅವರು ಹೇಳಿದರು.

ಪ್ರಧಾನಿ, ಮುಖ್ಯಮಂತ್ರಿ ಸಹಿತ ಗಣ್ಯರ ಸಂತಾಪ
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

‘ಗೋವಿಂದಾಚಾರ್ಯ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಅವರ ಕಾರ್ಯ ಮುಂದಿನ ಪೀಳಿಗೆ ಮುಂದುವರೆಸಬೇಕು. ಅವರ ಅಗಲಿಕೆ ನೋವು ತಂದಿದೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಅದೇ ರೀತಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಪರ್ಯಾಯ ಅದಮಾರು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಂತ್ರಾಲಯ ಮಠದ ಪೀಠಾಧಿ ಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದೆ. ಆಗ ಅವರು ನನ್ನ ಕಾರ್ಯಗಳಿಗೆ ಶುಭ ಹಾರೈಸಿದ್ದರು. ಅಲ್ಲದೆ ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದ್ದರು. ಅವರ ಕೊನೆಯ ದಿನಗಳಲ್ಲಿ ಆಡಿರುವ ಮಾತುಗಳನ್ನು ಅರ್ಥ ಮಾಡಿಕೊಂಡು ಹಾಗೂ ಅನುಭವಗಳನ್ನು ಸರಕಾರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು.

ಬನ್ನಂಜೆ ಗೋವಿಂದಾಚಾರ್ಯ ಪ್ರವಚನಕ್ಕೆ ಹಿಂದುಗಳು ಮಾತ್ರವಲ್ಲದೆ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು ಕೂಡ ಪ್ರಭಾವಿತರಾಗಿದ್ದರು. ಅವರ ನಿಧನ ದಿಂದ ಒಂದು ಯುಗ ಅಂತ್ಯವಾಗಿದೆ. ಅವರ ಪ್ರವಚನಗಳ ಆಡಿಯೋ, ವಿಡಿಯೋಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡುವ ಮೂಲಕ ಸರಕಾರ ಭವಿಷ್ಯಕ್ಕೆ ಉಳಿಸುವ ಕಾರ್ಯ ಮಾಡಬೇಕು.
-ಪ್ರಮೋದ್ ಮಧ್ವರಾಜ್, ಮಾಜಿ ಸಚಿವ.

ದೇಶದ ಪ್ರಾದೇಶಿಕ ಭಾಷೆಗಳಿಗೆ ಸಂಸ್ಕೃತವನ್ನು ಸಮನ್ವಯಗೊಳಿಸಿ ಸಾಹಿತ್ಯ ರಚಿಸಿದ ಮೇರು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು. ಈ ಕಾರ್ಯ ಮುಂದೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಭಗವದ್ಗೀತೆ ಪ್ರತೀ ಶ್ಲೋಕ ಗಳಿಗೆ ಆಚಾರ್ಯತ್ರೇಯರ ಭಾಷ್ಯ ಬರೆಯುವುದು ಅವರ ಕೊನೆಯ ಆಸೆ ಆಗಿತ್ತು. ಆದರೆ ಅವರು 9 ಅಧ್ಯಾಯಗಳನ್ನಷ್ಟೇ ಮುಗಿಸಿ ನಮ್ಮನ್ನು ಅಗಲಿದ್ದಾರೆ.

-ವಾಸುದೇವ ಭಟ್, ಸಂಸ್ಕಾರ ಭಾರತಿ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News