ಮಂಗಳೂರು: ವೆನ್ಲಾಕ್ ಆವರಣದಲ್ಲಿ ಸರ್ಜಿಕಲ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

Update: 2020-12-14 07:48 GMT

ಮಂಗಳೂರು, ಡಿ.14: ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ರೂ.37.52 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಜಿಕಲ್  ಕಟ್ಟಡ ಕಾಮಗಾರಿಗೆ ಸೋಮವಾರ ಸಂಸದ ನಳಿನ್ ಕುಮಾರ್  ಕಟೀಲು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮಂಗಳೂರು ಸ್ಮಾರ್ಟ್ ಸಿಟಿ  ಯೋಜನೆಯಡಿ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿವೆ. ದೇಶದಲ್ಲಿಯೇ ಮಂಗಳೂರು ನಗರವನ್ನು ನಂಬರ್ ವನ್ ಮತ್ತು ಮಾದರಿ ನಗರವಾಗಿಸುವಲ್ಲಿ ಕೆಲಸ ಕಾರ್ಯಗಳು ಸಾಗುತ್ತಿವೆ ಎಂದರು.

ವೆನ್ಲಾಕ್ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸುವಲ್ಲಿ ಆದ್ಯತೆ ನೀಡಲಾಗಿದೆ. ಆದಷ್ಟು ಶೀಘ್ರ ನೂತನ ಕಟ್ಟಡ ನಿರ್ಮಾಣವಾಗುವುದರೊಂದಿಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದವರು ಹೇಳಿದರು.

ನೂತನ ಕಟ್ಟಡವು 12,089 ಚ.ಮೀ. ವಿಸ್ತೀರ್ಣ ಹೊಂದಿದ್ದು,  ಐದು ಮಹಡಿಗಳನ್ನು ಒಳಗೊಳ್ಳಲಿದೆ. ಕ್ಷ- ಕಿರಣ, ಸ್ಕ್ಯಾನಿಂಗ್ ಘಟಕ ಮತ್ತು ವಿಕಿರಣ ಶಾಸ್ತ್ರ, ಲಾಂಡ್ರಿ, ಔಷಧಾಲಯ, ಅಲ್ಟ್ರಾಸೌಂಡ್, ಪ್ರತ್ಯೇಕ ಕ್ಲೀನ್ ಹಾಗೂ ಪೋಸ್ಟ್ ಕಾರಿಡಾರ್, ಪ್ರೀ -ಆಪರೇಟಿವ್ ಹಾಗೂ ಪೋಸ್ಟ್ ಆಪರೇಟಿವ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೂತನ ಕಟ್ಟಡ ಒಳಗೊಳ್ಳಲಿದೆ.

ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಮನಪಾ ಸದಸ್ಯರಾದ ವಿನಯ್ರಾಜ್, ಸುಧೀರ್ ಶೆಟ್ಟಿ, ಶರತ್, ಕಿರಣ್ ಕುಮಾರ್ ಪೂರ್ಣಿಮ, ಜಗದೀಶ್ ಶೆಟ್ಟಿ, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ವೆನ್ಲಾಕ್ ಡಿಎಂಒ ಸದಾಶಿವ ಶ್ಯಾನುಬಾಗ್, ಡಿಎಚ್ಒ ರಾಮಚಂದ್ರ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.

ಮನಪಾ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಶ್ರೀಧರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News