ಬಂಟ್ವಾಳ: ಅಂಗಡಿಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ

Update: 2020-12-14 16:18 GMT

ಬಂಟ್ವಾಳ, ಡಿ.14: ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿರುವ ಗೂಡಿನಬಳಿ ನಿವಾಸಿ ಇರ್ಶಾದ್ ಎಂಬವರ ಮಾಲಕತ್ವದ ಬ್ರೈಟ್ ಪವರ್ ಸಿಸ್ಟಂ ಎಂಬ ಇಲೆಕ್ಟ್ರೋನಿಕ್ ಸಾಮಾಗ್ರಿಗಳ ರಿಪೇರಿ ಹಾಗೂ ಮಾರಾಟ ಮಳಿಗೆಯಲ್ಲಿ ಸೋಮವಾರ ರಾತ್ರಿ ಉಂಟಾದ ಭಾರೀ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ. 

ರಾತ್ರಿ 7:45ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದ್ದು ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಮಾರ್ಗವಾಗಿ ಬರುತ್ತಿದ್ದ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಅಂಗಡಿ ಒಳಭಾಗದಿಂದ ಹೊಗೆಯಾಡುತ್ತಿದ್ದುದನ್ನು ಗಮನಿಸಿ ಸ್ಥಳೀಯರ ಸಹಕಾರದೊಂದಿಗೆ ಅಂಗಡಿ ತೆರೆದು ಪರಿಶೀಲಿಸಿದಾಗ ಬೆಂಕಿ ಅವಘಡ ಬೆಳಕಿಗೆ ಬಂದಿದೆ. ತಕ್ಷಣ ಅವರು ಬಂಟ್ವಾಳ ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ರವಾನಿಸಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ ಅಂಗಡಿಯಲ್ಲಿದ್ದ ಸಾಮಾಗ್ರಿಗಳೆಲ್ಲವೂ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. 

ಘಟನೆಯಿಂದ ಸುಮಾರು ಅಂದಾಜು 10 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News