ಕೋಸ್ಟಲ್ ಬರ್ತ್ ನಿರ್ಮಾಣ: ಸ್ಥಳೀಯರ ಆತಂಕ ನಿವಾರಿಸಲು ಒತ್ತಾಯಿಸಿ ಸಂಸದ ನಳಿನ್‌ಗೆ ಮನವಿ

Update: 2020-12-14 16:44 GMT

ಮಂಗಳೂರು, ಡಿ.14: ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗರೆಯಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಡಿವೈಎಫ್‌ಐನ ಬೆಂಗರೆ ಘಟಕ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಹಾಗೂ ಇತರಿಗೆ ಮನವಿ ಸಲ್ಲಿಸಿತು.

ಬೆಂಗ್ರೆ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ವಾಸವಿದ್ದಾರೆ. ಬಹುತೇಕ ಮೀನುಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಉಪವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ನಿವಾಸಿಗಳು ಅಂದಂದಿನ ದುಡಿಮೆಯಲ್ಲಿ ಬದುಕುವ ಬಡವರು. ಸಿಆರ್‌ಝೆಡ್ ಮತ್ತಿತರ ನೆಪಗಳನ್ನು ಮುಂದಿಟ್ಟು ಇಲ್ಲಿನ ನಿವಾಸಿಗಳನ್ನು ಮೂಲಭೂತ ಸೌಲಭ್ಯಗಳಿಂದ ವಂಚಿಸಲಾಗಿದೆ. ಮಂಗಳೂರು ನಗರ ಪಾಲಿಕೆ ವ್ಯಾಪಿತಿಗೆ ಒಳಪಟ್ಟಿದ್ದರೂ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆಗಳು, ಆರೋಗ್ಯ, ಸಾರಿಗೆ ಮುಂತಾದ ಮೂಲಭೂತ ಸೌಲಭ್ಯಗಳು ಇಲ್ಲಿನ ಜನತೆಗೆ ಇನ್ನೂ ತಲುಪಿಲ್ಲ. ಸಾವಿರಾರು ಸಂಖ್ಯೆಯ ಮನೆಗಳಿಗೆ ಇನ್ನೂ ಹಕ್ಕು ಪತ್ರ ನೀಡಲಾಗಿಲ್ಲ.
ಹಳೆ ಬಂದರಿನ ಕೂಗಳತೆ ದೂರದ ಈ ಗ್ರಾಮದಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ತರುವಾಗ ಸ್ಥಳೀಯರಿಗೆ ಯಾವ ಮಾಹಿತಿಯನ್ನೂ ನೀಡದೆ ಆಡಳಿತಗಾರರು ಏಕಪಕ್ಷೀಯವಾಗಿ ನಡೆದುಕೊಳ್ಳುವುದು ಪರಿಪಾಠದಂತಾಗಿದೆ. ಈಗ ಇಲ್ಲಿನ ಜನ ನಿಬಿಡ ವಸತಿ ಪ್ರದೇಶಕ್ಕೆ ತಾಗಿಕೊಂಡಂತೆ ಸಾಗರ ಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ನಿರ್ಮಾಣ ತೀರಾ ಆತಂಕಕಾರಿ ನಡವಳಿಕೆ. ಇಂತಹ ಒಂದು ಯೋಜನೆಯನ್ನು ಗ್ರಾಮದಲ್ಲಿ ತರುವಾಗ ಕನಿಷ್ಟ ಒಂದು ಸಾರ್ವಜನಿಕ ಅಹವಾಲು ಸಭೆಯನ್ನೂ ಸರಕಾರ ನಡೆಸದಿರುವುದು, ಏಕಾಏಕಿ ಶಿಲನ್ಯಾಸ ನಡೆಸುತ್ತಿರುವುದು ಅಚ್ಚರಿ, ಆತಂಕಕ್ಕೆ ಕಾರಣವಾಗಿದೆ. ಇದನ್ನು ಖಂಡಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಈಗ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನಿನಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು, ಸರಕಾರಿ ಪ್ರೌಢಶಾಲೆಯ ಮೈದಾನ, ಏಳೆಂಟು ಮೀನು ಒಣಗಿಸುವ ಟೆಂಟ್ಗಳು ಇವೆ. ಸುತ್ತಲೂ ಜನವಸತಿ ಇದೆ. ಇಂತಹ ಸ್ಥಳದಲ್ಲಿ ಇಷ್ಟು ದೊಡ್ಡದಾದ ಯೋಜನೆ ತರುವಾಗ ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿ ನೀಡದಿರುವುದು, ಗುರುತಿಸಲಾದ ಜಮೀನಿನಲ್ಲಿ ಮನೆ ಕಟ್ಟಿ ವಾಸ ಇರುವವರೊಂದಿಗೆ, ಮೀನು ಒಣಗಿಸುವ ವೃತ್ತಿ ನಡೆಸುವ ಮೀನುಗಾರರೊಂದಿಗೆ ಮಾತುಕತೆ ನಡೆಸದಿರುವುದು, ಅವರಿಗೆ ಬದಲಿ ವ್ಯವಸ್ಥೆಯ ಕುರಿತು ಯಾವುದೇ ಯೋಜನೆ ಸಿದ್ದ ಪಡಿಸದಿರುವುದು ಆಘಾತಕಾರಿ. ಪ್ರೌಢಶಾಲೆಗೆ ತಾಗಿಕೊಂಡು ಬರ್ತ್ ನಿರ್ಮಾಣಗೊಂಡಾಗ ತರಗತಿಗಳು ನಡೆಸಲಾಗದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಇದು ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಇಕ್ಕಟ್ಟಾದ ಈಗಿನ ಗುರುತಿಸಲಾದ ಸ್ಥಳದಿಂದ ಯೋಜನೆಯನ್ನು ಜನವಸತಿ ಇಲ್ಲದ ಒಂದಿಷ್ಟು ದೂರದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಈಗಿನ ಯೋಜನೆಯ ನಕ್ಷೆಯ ಒಳಗೆ ವಾಸ ಇರುವವವರ,  ಮೀನು ಒಣಗಿಸುವ ಕಾಯಕದಲ್ಲಿ ತೊಡಗಿಸಿಕೊಂಡವರನ್ನು ಬೀದಿ ಪಾಲು ಮಾಡದೆ ಅವರ ಆತಂಕಗಳನ್ನು ದೂರ ಮಾಡಬೇಕು, ಸರಕಾರಿ ಪ್ರೌಢಶಾಲೆಯ ಚಟುವಟಿಕೆಗಳಿಗೆ ಯಾವುದೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸಿದ ಸಂದರ್ಭ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಬೆಂಗರೆ ಪ್ರದೇಶದ ಮುಖಂಡರಾದ ನೌಶಾದ್, ಹನೀಫ್, ರಿಜ್ವಾನ್, ಯಹ್ಯಾ, ಅಸ್ಲಂ, ರಫೀಕ್, ನಾಸಿರ್, ಸಮದ್ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News