ಕೂಳೂರು ನೂತನ ಸೇತುವೆಗೆ 19ರಂದು ಶಿಲಾನ್ಯಾಸ

Update: 2020-12-15 08:25 GMT

ಮಂಗಳೂರು, ಡಿ.15: ಕೂಳೂರಿನಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಡಿ.19ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

66 ಕೋಟಿ ರೂ.ನ ಈ ಯೋಜನೆಯು ನೂತನ ಸೇತುವೆ ಹಾಗೂ ಕೂಡು ರಸ್ತೆಗಳ ನಿರ್ಮಾಣವನ್ನು ಒಳಗೊಂಡಿದೆ. ಎರಡೂ ಸೇತುವೆಗಳ ಮಧ್ಯೆ ಹೊಸದಾಗಿ 6 ಲೇನ್‌ನಲ್ಲಿ ಸೇತುವೆ ನಿರ್ಮಿಸಲಾಗುವುದು ಎಂದು ಸಂಸದ ತಿಳಿಸಿದ್ದಾರೆ.

 ಕೂಳೂರಿನಲ್ಲಿರುವ ಹಳೇ ಕಮಾನು ಸೇತುವೆ 1952ರ ಸೆಪ್ಟಂಬರ್ 21ರಂದು ಸಂಚಾರಕ್ಕೆ ಮುಕ್ತಗೊಂಡಿತ್ತು. 66 ವರ್ಷಗಳ ಹಿಂದೆ ಲೋಕಾರ್ಪಣೆಗೊಂಡ ಸೇತುವೆಯಿದು. 600 ಅಡಿ ಉದ್ದದ ಈ ಸೇತುವೆಯನ್ನು ಮದ್ರಾಸ್ ಪ್ರಾಂತ್ಯದ ಸಾರ್ವಜನಿಕ ಕಾರ್ಯ ವಿಭಾಗದ ಸಚಿವ ಎನ್.ರಂಗರೆಡ್ಡಿ ಉದ್ಘಾಟಿಸಿದ್ದರು.

ಕೂಳೂರು ಸೇತುವೆಯ ಸದ್ಯದ ಸ್ಥಿತಿ ಪರಿಶೀಲನೆಯನ್ನು ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್ ಎಂಬ ಖಾಸಗಿ ಸಂಸ್ಥೆಯು ಭೂಸಾರಿಗೆ ಸಚಿವಾಲಯದ ಸೂಚನೆಯನ್ವಯ ಕೈಗೊಂಡಿದ್ದು ಪ್ರಯಾಣಕ್ಕೆ ಅಯೋಗ್ಯ ಎಂಬ ವರದಿ ನೀಡಿತ್ತು. ಬಳಿಕ, ಭಾರತ್‌ಮಾಲಾ ಯೋಜನೆ ಬಗ್ಗೆ ಸರ್ವೇ ನಡೆಸುತ್ತಿರುವ ತಜ್ಞರ ತಂಡ ಕೂಡ ಹಳೆಯ ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿತ್ತು. ಬಳಿಕ ಈ ಸೇತುವೆಯನ್ನು ಸದೃಢಪಡಿಸುವ ಕಾಮಗಾರಿ ನಡೆಸಲಾಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News