ಪಕ್ಕಲಡ್ಕದಲ್ಲಿ ರಕ್ತದಾನ ಶಿಬಿರ

Update: 2020-12-15 16:45 GMT

ಮಂಗಳೂರು, ಡಿ.15: ಪಕ್ಕಲಡ್ಕ ಯುವಕ ಮಂಡಲ ಮತ್ತು ಲಯನ್ಸ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಪಕ್ಕಲಡ್ಕ ಭಗತ್ ಸಿಂಗ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯ ಪ್ರವೀಣ್ ಚಂದ್ರ ಆಳ್ವ ನೆರವೇರಿಸಿ ಮಾತನಾಡಿದ ಅವರು, ಪಕ್ಕಲಡ್ಕ ಯುವಕ ಮಂಡಲದ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜಮುಖಿಯಾಗಿ ಚಿಂತಿಸುವ ಯುವಕ ಮಂಡಲದ ಸದಸ್ಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು.

ಲಾಕ್‌ಡೌನ್ ಸಂದರ್ಭ ಹಲವು ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ಹಸಿದವರಿಗೆ ಅನ್ನ ನೀಡಿ ಜೀವಪರ ಕಾಳಜಿ ತೋರಿಸಿಕೊಟ್ಟಿದ್ದಾರೆ. ಪಕ್ಕಲಡ್ಕ ಯುವಕ ಮಂಡಲವು ಕಂಕನಾಡಿ ಗ್ರಾಮದ ಕಿರೀಟಕ್ಕೊಂದು ಗರಿ ಇದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಪಕ್ ಬಜಾಲ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯಅತಿಥಿಯಾಗಿ ಲಯನ್ಸ್ ಕ್ಲಬ್ ಸಂಸ್ಥೆಯ ಕೋಶಾಧಿಕಾರಿ ಸ್ಟಾನಿ ಲಸ್ರಾಡೋ, ಜಯಶ್ರೀ ಬಸ್ ಮಾಲಕ ಮನೋಜ್ ಮಾಣೈ, ರೆಡ್‌ಕ್ರಾಸ್ ವೈದ್ಯ ಜಯ್, ಡಿವೈಎಫ್‌ಐ ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಜಗದೀಶ್ ಬಜಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರಕ್ತದಾನ ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News