ಕಲಾರಂಗದಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯ: ಡಾ.ಮಾಧವಿ ಭಂಡಾರಿ

Update: 2020-12-16 16:27 GMT

ಉಡುಪಿ, ಡಿ.16:ಮನುಷ್ಯ ಸಮಾಜ ಜೀವಿಯಾಗಿದ್ದು, ಸಾಹಿತ್ಯ, ಸಂಗೀತ, ಕಲೆಯಲ್ಲಿ ಆಸಕ್ತಿವಹಿಸುವುದು ಅವಶ್ಯಕವೆಂದು ಸಾಹಿತಿ ಡಾ.ಮಾಧವಿ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಉಳಿದ ಜೀವಿಗಳಿಗಿಂತ ಭಿನ್ನವಾಗಿ ಕಾಣುವುದಕ್ಕೆ ಮುಖ್ಯವಾಗಿ ಆತನ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗುತ್ತವೆ. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಮುಂತಾದ ಚಟುವಟಿಕೆಗಳಲ್ಲಿ ವ್ಯಕ್ತಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಆತನ ವ್ಯಕ್ತಿತ್ವ ವಿಶೇಷ ರೂಪ ಪಡೆದುಕೊಳ್ಳಲು ಸಾಧ್ಯ. ಮನಸ್ಸು ಸೃಜನಶೀಲತೆಯನ್ನು ಪಡೆಯಬೇಕಾದರೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕಲೆ ಸಾಧಕರ ಸ್ವತ್ತಾಗಿದ್ದು, ಕಲಾ ಸಾಧಕರು ಹಾಗೂ ಸಾಹಿತಿಗಳು ರಾಜ್ಯ-ರಾಷಟ್ರೆಮಟ್ಟದಲ್ಲಿ ಹೆಸರು ಮಾಡುತ್ತಿರು ವುದರಿಂದ ಉಡುಪಿ ಜಿಲ್ಲೆ ದೇಶದಲ್ಲಿ ಹೆಸರುವಾಸಿಯಾಗಿದೆ ಎಂದರು.

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಜಾನಪದ ಪ್ರದರ್ಶನಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿ ರುವುದರಿಂದ ಯುವ ಸಮೂಹ ನಮ್ಮ ಕಲೆ ಸಂಸ್ಕೃತಿಯ ಕುರಿತು ಆಸಕ್ತಿ ತೋರಿಸುತ್ತಿರುವುದು ಸಂತೋಷದ ವಿಷಯ.ಜಾನಪದ ಕಲೆಗಳು ನಶಿಸುತ್ತಿರುವ ಈ ಕಾಲಮಾನದಲ್ಲಿ ಜಾನಪದದ ದಾಖಲೀಕರಣ, ಸಂಗ್ರಹ ಮತ್ತು ಸಂಶೋಧನ ಕ್ಷೇತ್ರದಲ್ಲಿಯೂ ಉದ್ಯೋಗ ಸೃಷ್ಟಿಯಾಗಬೇಕಾದ ಅಗತ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News