ಕಾಪು ಪುರಸಭೆ: ಪೇಟೆಯಲ್ಲಿ ಕೊಳಚೆ ನೀರು ಸಮಸ್ಯೆ

Update: 2020-12-16 16:56 GMT

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಕೊಳಚೆ ನೀರಿನ ಸಮಸ್ಯೆಯ ಬಗ್ಗೆ ಬುಧವಾರ ನಡೆದ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಸತಿ ಸಮುಚ್ಛಯಗಳಿಗೆ ಶುದ್ಧೀಕರಣ ಘಟಕ ಅಳವಡಿಸಿ ಅಳವಡಿಸಿ ಕಾರ್ಯಾಚರಣೆಯಾಗದೇ ಪೂರ್ಣತಾ ಪ್ರಮಾಣಪತ್ರ ವಿತರಣೆ ಮಾಡದೆ ಇರಲು ನಿರ್ಣಯಕೈಗೊಳ್ಳಲಾಯಿತು. 

ಸದಸ್ಯೆ ಅಶ್ವಿನಿ ಕಾಪು ಪೇಟೆ ಕೊಳಚೆ ನೀರಿನಿಂದ ಬೀಡುಬದಿ ವಾರ್ಡ್‍ನ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಮಸ್ಯೆ ಪರಿಹರಿಸುವಂತೆ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸೂಕ್ತ ಒಳಚರಂಡಿಯಿಲ್ಲದೆ ಇರುವುದೇ ಇದಕ್ಕೆ ಕಾರಣ ಎಂದು ದೂರಿದರು.

ಪೇಟೆ ಭಾಗದ ವಸತಿ ಸಮುಚ್ಛಯವೊಂದರ ಶುದ್ಧೀಕರಣ ಘಟಕದ ನೀರು ಹೊರಬಿಡಲಾಗುತ್ತಿದ್ದು, ಅವರಿಗೆ ಈಗಾಗಲೇ ನೋಟಿಸ್ ನೀಡಲಾ ಗಿದೆ. ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ನೋಟಿಸ್ ನೀಡಲಾಗುವುದು, ಬಳಿಕ ವಿದ್ಯುತ್ ಸಂಪರ್ಕ ಕಡಿತಕ್ಕೂ ಮುಂದಾಗಲಾಗುವುದು ಎಂದು ಅಧ್ಯಕ್ಷ ಅನಿಲ್‍ಕುಮಾರ್ ಹೇಳಿದರು.

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ವಸತಿ ಸಮುಚ್ಛಯಗಳಿಗೆ ಪರವಾನಿಗೆ ನೀಡಲಾಗಿಲ್ಲ. ವಸತಿ ಸಮುಚ್ಛಯ ಗಳು ಅಭಿವೃದ್ಧಿ ದೃಷ್ಟಿಯಿಂದ ನಿವಾರ್ಯವಾದರೂ ಕಾನೂನು ಮೀರಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶ ನಾವಡ ಎಚ್ಚರಿಸಿದರು.

ನಾಮನಿರ್ದೇಶಿತ ಸದಸ್ಯ ಪ್ರದೀಪ್ ಅವರು ಪುರಸಭೆ ಸಮೀಪದ ಸರ್ಕಾರಿ ಜಮೀನಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸುವಂತೆ ನೀಡಿದ ಸಲಹೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಎಲ್ಲೂರಿನ 10 ಎಕರೆ ಸ್ಥಳದಲ್ಲಿ ಪುರಸಭೆಯ ಶುದ್ಧೀಕರಣ ಘಟಕ ನಿರ್ಮಿಸಿ ಟ್ಯಾಂಕರ್ ಮೂಲಕ ಕೊಳಚೆ ನೀರು ಸಾಗಿಸುವಂತೆ ಉಚಿತ ಸಲಹೆ ನೀಡಿದರು. ಹಿಂದೆಯೂ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಹಲವು ಕಡೆ ಜಾಗವನ್ನು ಗುರುತಿಸಿದರೂ, ಎಲ್ಲೆಡೆ ವಿರೋಧ ದಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದು ಕಾಂಗ್ರೆಸ್ ಸದಸ್ಯ ಕೆ.ಎಚ್.ಉಸ್ಮಾನ್ ಹೇಳಿದರು.

ಪ್ರಾಧಿಕಾರದ ನಿಯಾಮವಳಿಯಿಂದ ಜನರಿಗೆ ವಸತಿ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿಗೆ ಅನುಕೂಲವಾಗುವಂತೆ ಕಾಯ್ದೆಯನ್ನು ಸರಳಗೊಳಿಸುವಂತೆ ಸದಸ್ಯರಾದ ಶಾಬು ಸಾಹೇಬ್, ಕಿರಣ್ ಆಳ್ವ, ಉಸ್ಮಾನ್ ಆಗ್ರಹಿಸಿದರು.

ಅದಕ್ಕುತ್ತರಿಸಿದ ಪ್ರಾಧಿಕಾರ ಇಂಜಿನಿಯರ್, ಕಾಯ್ದೆ ಸರಳಗೊಳಿಸುವಲ್ಲಿ ನಾವು ತೀರ್ಮಾನ ಕೈಗೊಳ್ಳುವಂತಿಲ್ಲ. ಕಾಯ್ದೆಯಂತೆಯೇ ನಾವು ಕಾರ್ಯ ನಿರ್ವಹಿಸಬೇಕಿದೆ. ನಗರ ಯೋಜನಾ ಪ್ರಾಧಿಕಾರದಲ್ಲಿ ಪುರಸಭೆ ಸದಸ್ಯರೊಬ್ಬರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸು ವಂತೆ 2016ರಲ್ಲಿಯೇ ಸುತ್ತೋಲೆ ಬಂದಿದ್ದರೂ, ಅದನ್ನು ಗಮನಕ್ಕೆ ತಾರದಿರುವ ಬಗ್ಗೆ ಸದಸ್ಯ ಅರಣ್ ಶೆಟ್ಟಿ ಪಾದೂರು ಪ್ರಶ್ನಿಸಿದರು. ಈ ಬಗ್ಗೆ ಸದಸ್ಯ ಕಾರ್ಯದರ್ಶಿ ಗಮನಕ್ಕೆ ತರುವುದಾಗಿ ತಿಳಿಸಿದರು.

ವಾರ್ಡ್‍ಸಭೆ: ಪುರಸಭೆಯ 23 ವಾರ್ಡ್‍ಗಳಲ್ಲಿ ಕೆಲ ವಾರ್ಡ್‍ಗಳ ಸಮಸ್ಯೆಗಳು ಗಮನಕ್ಕೆ ಬರುತ್ತಿಲ್ಲ. ಅದಕ್ಕಾಗಿ ಮುಂದಿನ ತಿಂಗಳಿನಿಂದ ಪ್ರತೀ ವಾರ್ಡ್‍ನಲ್ಲಿ ವಾರ್ಡ್ ಸಭೆ ನಡೆಸಿ ಜನರ ಸಮಸ್ಯೆ ಆಲಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಪರಿಶೀಲನೆಗೆ ಶೀಘ್ರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.

ಗ್ರಂಥಾಲಯ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಅರುಣ್ ಶೆಟ್ಟಿ ಪಾದೂರು ಹೆಸರು ಅಂತಿಮಗೊಳಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಾಂಭವಿ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News