ಮಂಗಳೂರು 'ಪೊಲೀಸ್ ಗೋಲಿಬಾರ್' ಪ್ರಕರಣಕ್ಕೆ 1 ವರ್ಷ

Update: 2020-12-19 07:16 GMT

ಮಂಗಳೂರು, ಡಿ.19: 2019ರ ಡಿಸೆಂಬರ್ 19, ಗುರುವಾರ. ರಾಜ್ಯದ, ಅದರಲ್ಲೂ ಕರಾವಳಿಯ ಜನರು ಮರೆಯಲು ಸಾಧ್ಯವಿಲ್ಲದ ದಿನ. ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಜನರು ಬೀದಿಗಿಳಿದಿದ್ದರು. ಆ ಹೋರಾಟದ ಭಾಗವಾಗಿ 2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಕೆಲವು ಯುವಕರು ಪ್ರತಿಭಟನೆಗಾಗಿ ಸೇರಿದ್ದರು. ಸಾಮಾನ್ಯ ಪ್ರತಿಭಟನೆಯಾಗಿ ಮುಗಿಯಬೇಕಿದ್ದ ಅಂದಿನ ಘಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಉಂಟಾದ ಸಂಘರ್ಷದಲ್ಲಿ ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದರು. ಎಂಟು ಮಂದಿ ಪೊಲೀಸ್ ಗುಂಡೇಟಿನಿಂದ ಗಾಯಗೊಂಡಿದ್ದರು. ಲಾಠಿಚಾರ್ಜ್‌ನಲ್ಲಿ 38ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದವು.

ಮಂಗಳೂರಿನ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿಗುರುತಿಸಲ್ಪಟ್ಟಿರುವ, ಪೊಲೀಸ್ ಇಲಾಖೆಯ ವೈಫಲ್ಯ ಎಂದು ಆರೋಪಿಸಲಾಗುವ ಮಂಗಳೂರು ಗೋಲಿಬಾರ್‌ಗೆ ಇಂದು (ಡಿ.19) ಒಂದು ವರ್ಷ.

► ಏನಿದು ಕರಾಳ ದಿನ?: ಕೇಂದ್ರ ಸರಕಾರ ದೇಶಾದ್ಯಂತ ಜಾರಿಗೆ ಉದ್ದೇಶಿಸಿದ್ದ ಸಿಎಎ-ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಸಂಘಟನೆಯೊಂದು 2019ರ ಡಿ.19ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೊನೆ ಕ್ಷಣದಲ್ಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ಡಿ.18ರ ಸಂಜೆಯಿಂದ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿದ್ದರು. ಆದರೆ, ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಯುವ ಬಗ್ಗೆ ವ್ಯಾಪಕವಾಗಿ ಸಂದೇಶಗಳು ಹರಿದಾಡಿದ್ದವು.

ಮರುದಿನ (ಡಿ.19) ಅಪರಾಹ್ನ ಕೆಲ ಅಸಂಘಟಿತ ಯುವಕರ ಗುಂಪೊಂದು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿತ್ತು. ಗುಂಪಿನ ಜೊತೆ ಸಾರ್ವಜನಿಕರೂ ಕುತೂಹಲದಿಂದ ಜಮಾವಣೆಗೊಂಡಿದ್ದರು. ಈ ನಡುವೆ ‘ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವಂತಿಲ್ಲ’ ಎಂದ ಪೊಲೀಸರು ಜಮಾವಣೆಗೊಂಡವರನ್ನು ಚದುರಿಸಲು ಯತ್ನಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಆಕ್ರೋಶಗೊಂಡಿದ್ದ ಜನರು ತಕ್ಷಣಕ್ಕೆ ಅಲ್ಲಿಂದ ಚದುರಲಿಲ್ಲ. ಅಲ್ಲಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ದೊಡ್ಡ ಸಂಘರ್ಷ ಏರ್ಪಟ್ಟಿತು.

ಇದು ಮುಂದೆ ಹಿಂಸಾಚಾರಕ್ಕೆ ತಿರುಗಿತು. ಮಂಗಳೂರಿನ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ನಡೆದ ಹಿಂಸಾಚಾರವು ಬಂದರ್, ಹಂಪನಕಟ್ಟೆ, ರಾವ್ ಆ್ಯಂಡ್ ರಾವ್ ಸರ್ಕಲ್, ಕೇಂದ್ರ ಮಾರುಕಟ್ಟೆ ರಸ್ತೆ ಯತ್ತ ವಿಸ್ತರಿಸಿತು. ಕಲ್ಲು ತೂರಾಟ, ಲಾಠಿಚಾರ್ಜ್, ಅಶ್ರುವಾಯು, ಗಾಳಿಯಲ್ಲಿ ಗುಂಡು ಇತ್ಯಾದಿ ಪ್ರಯೋಗ ನಡೆದವು. ಇದರಿಂದ 38ಕ್ಕೂ ಅಧಿಕ ಯುವಕರು ಗಾಯಗೊಂಡರು.

ಸಂಜೆಯಾಗುತ್ತಲೇ ಹಿಂಸಾಚಾರ ಯಾರೂ ಊಹಿಸದ ಮಟ್ಟಿಗೆ ತಿರುವು ಪಡೆಯಿತು. ಪೊಲೀಸರು ನಡೆಸಿದ ಗೋಲಿಬಾರ್‌ಗೆ ಬಂದರ್ ಕಂದಕ್ ನಿವಾಸಿ ಅಬ್ದುಲ್ ಜಲೀಲ್(42) ಮತ್ತು ಕುದ್ರೋಳಿ ನಿವಾಸಿ ನೌಶೀನ್(25) ಎಂಬವರು ಬಲಿಯಾದರು. ಅದಲ್ಲದೆ ಪೊಲೀಸರ ಗಡಿಡಿುಂಡೇಟಿನಿಂದ ಹೊರ ರಾಜ್ಯದಿಂದ ಹೊಟ್ಟೆಪಾಡಿಗೆಂದು ದುಡಿಯಲು ಬಂದ ಯುವಕ ಸಹಿತ ಎಂಟು ಮಂದಿ ಗಾಯಗೊಂಡರು. 22 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು.

ಅಸಂಘಟಿತ ಯುವಕರ ಗುಂಪು ಹಾಗೂ ಪೊಲೀಸರೂ ಪರಸ್ಪರ ಕಲ್ಲು ತೂರಾಡಿದ ವೀಡಿಯೊಗಳು, ಪೊಲೀಸರು ಬಾಲಕನೋರ್ವನನ್ನು ಅಟ್ಟಾಡಿಸುವುದು, ದಂಪತಿಯನ್ನು ಎಳೆದಾಡುವಂತಹ ವೀಡಿಯೊಗಳು ಅದೇದಿನ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಗೋಲಿಬಾರ್ ನಡೆದ ದಿನದಿಂದ ಮೂರು ದಿನಗಳವರೆಗೆ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು.

ಕಲ್ಲು ತೂರಾಟ, ಗಲಭೆ ಸೃಷ್ಟಿಸಿದ ಆರೋಪದಲ್ಲಿ ಗುಂಡೇಟಿಗೆ ಬಲಿಯಾದವರು, ಗಾಯಾಳುಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾದವು. ಇದೇ ಸಂದರ್ಭ ಪೊಲೀಸರ ವಿರುದ್ಧವೂ ಕೆಲವೆಡೆ ದೂರುಗಳು ದಾಖಲಾದವು. ಮಂಗಳೂರು ಪೊಲೀಸರಿಂದ ಹಿಂಸಾಚಾರ- ಗೋಲಿಬಾರ್ ಪ್ರಕರಣದ ತನಿಖೆ ಆರಂಭಗೊಂಡಿತು. ಆಗಿನ ಎಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತನಿಖಾ ತಂಡದಿಂದ ವಿಚಾರಣೆ ಪ್ರಾರಂಭಗೊಂಡಿತು. ಕೆಲ ಎಫ್‌ಐಆರ್‌ಗಳ ವಿಚಾರಣೆ ಪೂರ್ಣಗೊಳ್ಳುವ ಹಂತದಲ್ಲಿದ್ದರೆ, ಇನ್ನು ಕೆಲ ಎಫ್‌ಐಆರ್-ದೂರುಗಳೂ ಕಡತದಲ್ಲೇ ಉಳಿದಿವೆ.

► ಸಿಐಡಿಗೆ ಹಸ್ತಾಂತರ: ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಆಗಿನ ಎಸಿಪಿ ವಿನಯ್ ಗಾಂವ್ಕರ್ ನಡೆಸಿದ್ದರು. ಬಳಿಕ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿತು. ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡವು ಈಗಾಗಲೇ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.

ಡಿ.19ರಂದು ಮಂಗಳೂರಿಗೆ ಬಂದಿದ್ದ ಕಾಸರಗೋಡು ಸುತ್ತಮುತ್ತಲಿನ ಸಾವಿರಾರು ಮಂದಿಗೆ ಮೊಬೈಲ್ ನೆಟ್‌ವರ್ಕ್ ಆಧಾರದ ಪೊಲೀಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಅಲ್ಲದೆ, ಘಟನೆಯ ಸುದ್ದಿ ಮಾಡಲು ಬಂದಿದ್ದ ಕೇರಳದ ಪತ್ರಕರ್ತರನ್ನೂ ದಿಗ್ಬಂಧನದಲ್ಲಿಟ್ಟು ಸಂಜೆ ವೇಳೆಗೆ ಬಿಡುಗಡೆಗೊಳಿಸಲಾಗಿತ್ತು.

ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೋಲಿಬಾರ್‌ಗೆ ಬಲಿಯಾಗಿದ್ದ ಇಬ್ಬರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದರೂ ಬಳಿಕ ತನ್ನ ಹೇಳಿಕೆ ಹಿಂಪ ಡೆದಿದ್ದೂ ಸುದ್ದಿಯಾಗಿತ್ತು. ಎರಡು ದಿನಗಳ ನಂತರ ಮಂಗಳೂರಿಗೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೋಲಿಬಾರ್‌ಗೆ ಬಲಿಯಾದ ಇಬ್ಬರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಅಲ್ಲದೆ, ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದರು. ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪೊಲೀಸ್ ಕಾರ್ಯ ವೈಖರಿಯ ಬಗ್ಗೆ ಕಿಡಿಕಾರಿದ್ದರು.

ಪೊಲೀಸ್ ಹಿಂಸಾಚಾರವನ್ನು ಖಂಡಿಸಿ ಡಿ.21ರಂದು ಸಿಪಿಐ ರಾಷ್ಟ್ರೀಯ ಮುಖಂಡ, ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಸಹಿತ 6 ಮಂದಿ ಕರ್ಫ್ಯೂ ಉಲ್ಲಂಘಿಸಿ ಮಂಗಳೂರು ಮಹಾನಗರ ಪಾಲಿಕೆ ಎದುರಿನ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಅಪರಾಹ್ನದ ಬಳಿಕ ಬಿಡುಗಡೆಗೊಳಿಸಿದ್ದರು.

***************************

►► ಸತ್ಯಶೋಧನಾ ವರದಿಗಳು ಹೇಳುವುದೇನು?

ಮಂಗಳೂರು ಗೋಲಿಬಾರ್ ಪ್ರಕರಣ, ಪೊಲೀಸ್ ದೌರ್ಜನ್ಯಗಳ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ನೇತೃತ್ವದ ಜನತಾ ನ್ಯಾಯಾಲಯ ಮತ್ತು ಪಿಯುಸಿಎಲ್ ಪ್ರತ್ಯೇಕವಾಗಿ ಸತ್ಯಶೋಧನಾ ವರದಿಯನ್ನು ಜನರ ಮುಂದಿಟ್ಟಿದ್ದವು.

ಸರಕಾರದ ಮುಂದೆ ತನಿಖಾ ವರದಿ

ದೇಶ-ವಿದೇಶದಲ್ಲಿ ಸುದ್ದಿಯಾಗಿದ್ದ ಮಂಗಳೂರು ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖಾ ವರದಿ ಇದೀಗ ರಾಜ್ಯ ಸರಕಾರದ ಮುಂದಿದೆ. ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಜಿ.ಜಗದೀಶ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯಾಗಿ ಸರಕಾರದಿಂದ ನಿಯುಕ್ತಿಗೊಂಡಿದ್ದರು. ಅವರು ಆರು ತಿಂಗಳಲ್ಲಿ 14 ಬಾರಿ ಮಂಗಳೂರಿಗೆ ಆಗಮಿಸಿ ವಿಚಾರಣೆ ನಡೆಸಿ ಸುಮಾರು 114 ಸಾಕ್ಷಿಗಳ ಹೇಳಿಕೆ ಪಡೆದಿದ್ದರು. ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ಡಿಸಿಪಿ ಅರುಣಾಂಶುಗಿರಿ ಮತ್ತಿತರ ಅಧಿಕಾರಿಗಳು ವಿಚಾರಣೆಗೆ ಕಟೆಕಟೆ ಹತ್ತಿದ್ದರು. ತನಿಖಾಧಿಕಾರಿಯು ಸುಮಾರು 2,500 ದಾಖಲೆ ಗಳನ್ನು ಒಳಗೊಂಡಂತೆ 50 ಪುಟಗಳ ತನಿಖಾ ವರದಿ ತಯಾರಿಸಿ 2020ರ ನವೆಂಬರ್ 4ರಂದು ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ವರದಿಯಲ್ಲಿ ಅಡಕವಾಗಿರುವ ಅಂಶಗಳನ್ನು ಗೌಪ್ಯವಾಗಿರಿಸಲಾಗಿದೆ.

► ಜನತಾ ನ್ಯಾಯಾಲಯದ ಸತ್ಯಶೋಧನಾ ವರದಿ ಮುಖ್ಯಾಂಶಗಳು

► ಘಟನೆಗೆ ಸಂಬಂಧವೇ ಇಲ್ಲದ ಅಮಾಯಕರ ಮೇಲೆ ದೌರ್ಜನ್ಯ ನಡೆಸಲಾಗಿದೆ.

► ಗೋಲಿಬಾರ್‌ಗೆ ಬಲಿಯಾದ ಜಲೀಲ್, ನೌಶಿನ್ ಕುಟುಂಬಗಳನ್ನು ರಕ್ಷಿಸಬೇಕು, ಸಮರ್ಪಕ ಪರಿಹಾರ ನೀಡಬೇಕು.

► ಪೊಲೀಸರು ವಿವೇಚನಾರಹಿತವಾಗಿ ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಗೋಲಿಬಾರ್ ನಡೆಸಿದ್ದಾರೆ.

► ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ನೀತಿ ಸಂಹಿತೆಯ ಅಧ್ಯಾಯ 1ರಲ್ಲಿ ನಿಗದಿಪಡಿಸಿದಂತೆ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಪೊಲೀಸ್ ಅಧಿಕಾರಿಗಳ ಮುಖ್ಯ ಜವಾಬ್ದಾರಿ. ಆದರೆ, ಡಿಸೆಂಬರ್ 19ರಂದು ಪೊಲೀಸ್ ಸಿಬ್ಬಂದಿಯ ಕ್ರಮಗಳು ಕರ್ನಾಟಕ ಪೊಲೀಸ್ ಕೈಪಿಡಿಯಲ್ಲಿರುವ ಅಧಿಕಾರವನ್ನು ಉಲ್ಲಂಘಿಸಿದೆ.

► ಲಾಠಿಚಾರ್ಜ್ ಮತ್ತು ಗೋಲಿಬಾರ್ ಆರಂಭವಾಗುವ ಮೊದಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ವಿಫಲವಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಕೆರಳಿಸಿದ್ದಾರೆ ಮತ್ತು ನಿಂದನೀಯ ಭಾಷೆಯನ್ನು ಪ್ರಯೋಗಿಸಿದ್ದಾರೆ.

► ಎಂ.ಎಂ. ಕಿಣಿ ರೈಫಲ್ ಅಂಗಡಿಗೆ ಉಂಟಾದ ಹಾನಿ ಹಾಗೂ ಸಾರ್ವಜನಿಕರಿಂದ ಬಂದರು ಪೊಲೀಸ್ ಠಾಣೆಗೆ ಮುತ್ತಿಗೆ ನಾಗರಿಕರ ಮೇಲೆ ಬಲ ಪ್ರಯೋಗಕ್ಕೆ ಪ್ರಮುಖ ಕಾರಣ ಎಂದು ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸ್ ಅಧಿಕಾರಿಗಳು ನೀಡಿಲ್ಲ.

► ಮಾನವ ಹಕ್ಕುಗಳ ಮಾನದಂಡಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಡಿಸೆಂಬರ್ 19ರ ಘಟನೆಯ ಹಿನ್ನೆಲೆಯನ್ನು ಗಮನಿಸುವಾಗ ಹಾಗೂ ನಾಗರಿಕರ ವಿರುದ್ಧ ಬಳಸಲಾದ ಅಧಿಕಾರಿಗಳ ಬಲ ಪ್ರಯೋಗವನ್ನು ಅವಲೋಕಿಸಿದಾಗ ನೀತಿ ಸಂಹಿತೆಯ ವಿಧಿಯನ್ನೇ ಟೊಳ್ಳಾಗಿಸಿದಂತಾಗಿದೆ.

***************************

►► ಹೈಕೋರ್ಟ್-ಸುಪ್ರೀಂ ಕೋರ್ಟ್ ಮೆಲೇರಿದ್ದ ಸಂತ್ರಸ್ತರು

ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಗುಂಡೇಟಿ ಗೊಳಗಾದ 8 ಮಂದಿಯ ಪೈಕಿ ಕೆಲವರ ಮೇಲೆ ಹಾಗೂ ಇತರ 22 ಮಂದಿಯ ವಿರುದ್ಧವೂ ಹಲವು ಸೆಕ್ಷನ್‌ನಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

22 ಮಂದಿಯ ಪೈಕಿ ಇಬ್ಬರಿಗೆ ಹೈಕೋರ್ಟ್ ಜಾಮೀನು ನೀಡಿದ್ದರೆ, ಉಳಿದ 20 ಮಂದಿ 9-10 ತಿಂಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದರು. ಅವರು ಕಳೆದ ಸೆಪ್ಟಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ.

ರಾಜ್ಯ ಸರಕಾರದ ಪರವಾಗಿ ಭಾರತೀಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ ‘ಗಲಭೆಯಲ್ಲಿ ಆರೋಪಿಗಳು ಭಾಗಿಯಾಗಿರುವುದಕ್ಕೆ ಪುರಾವೆಗಳಿವೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು’ ಎಂದು ನ್ಯಾಯಾಧೀಶರಲ್ಲಿ ಮನವರಿಕೆ ಮಾಡಲು ಯತ್ನಿಸಿದರು. ಆರೋಪಿಗಳ ಪರ ಕೇರಳದ ಮಾಜಿ ನ್ಯಾಯಾಧೀಶ ಹಾಗೂ ಹಿರಿಯ ನ್ಯಾಯವಾದಿ ಆರ್.ಬಸಂತ್ ನೇತೃತ್ವದ ತಂಡವು ವಾದ ಮಂಡಿಸಿತ್ತು. ಇತ್ತಂಡಗಳ ವಾದ ಆಲಿಸಿದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ್ದರು.

► 48 ಗಂಟೆ ಇಂಟರ್‌ನೆಟ್ ಸ್ತಬ್ಧ!

ಮಂಗಳೂರು ಪೊಲೀಸ್ ಗೋಲಿಬಾರ್ ನಡೆಯುತ್ತಿದ್ದಂತೆ ಡಿ.19ರಂದು ರಾತ್ರಿ 10ರಿಂದ ಅನ್ವಯವಾಗುವಂತೆ 48 ಗಂಟೆಗಳ ಕಾಲ ದ.ಕ. ಜಿಲ್ಲಾದ್ಯಂತ ಇಂಟರ್‌ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಗೃಹ ಇಲಾಖೆಯ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಆದೇಶಿಸಿದ್ದರು. ಕರ್ನಾಟಕದಲ್ಲೇ ಮೊದಲ ಬಾರಿಗೆ ಜಿಲ್ಲೆಯೊಂದರಲ್ಲಿ ಎರಡು ದಿನಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಎನ್ನುವುದು ಈಗ ಇತಿಹಾಸ.

ಪಿಯುಸಿಎಲ್ ಮಧ್ಯಂತರ ಸತ್ಯಶೋಧನಾ ವರದಿಯ ಮುಖ್ಯಾಂಶಗಳು

► ಒಂದು ಸಮುದಾಯವನ್ನು ಗುರಿಯಾಗಿಸಿ ಪೊಲೀಸರಿಂದ ಅತಿರೇಕದ ಕೃತ್ಯಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

► ಒಂದು ಕೋಮನ್ನು ಗುರಿಯಾಗಿಸಿಕೊಂಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

► ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿ ಅಮಾಯಕರ ಕೊಲೆಗೆ ಕಾರಣವಾದ ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕು.

► ವಿವಾದಿತ ಹೇಳಿಕೆ ನೀಡಿರುವ ಕದ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಾಂತಾರಾಮ್ ಕುಂದರ್‌ರನ್ನು ಅಮಾನತುಗೊಳಿಸಬೇಕು.

► ಪೊಲೀಸರ ಗುಂಡಿಗೆ ಬಲಿಯಾದ ಕುಟುಂಬಗಳಿಗೆ ಘೋಷಿಸಿ ಹಿಂಪಡೆದಿರುವ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು. ಎಲ್ಲ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು.

► ಅಂತರ್‌ರಾಷ್ಟ್ರೀಯ ಯುದ್ಧದ ಸಮಯದಲ್ಲೂ ಆಸ್ಪತ್ರೆಗಳಿಗೆ ದಾಳಿ ಮಾಡುವುದಿಲ್ಲ. ಆದರೆ ಈ ಘಟನೆಯ ಸಂದರ್ಭ ಆಸ್ಪತ್ರೆಯೊಳಗೆ ಅಶ್ರುವಾಯು ಸಿಡಿಸಿರುವುದು ಅಕ್ಷಮ್ಯ.

***************************

►► ನೋವಿನಿಂದ ಹೊರ ಬಾರದ ಮೃತರ ಕುಟುಂಬಸ್ಥರು

  

ಅಬ್ದುಲ್ ಜಲೀಲ್           ನೌಶಿನ್

ಪೊಲೀಸರು ಗುಂಡೇಟಿಗೆ ಬಲಿಯಾದ ಬಂದರ್ ಕಂದುಕದ ಅಬ್ದುಲ್ ಜಲೀಲ್ ಮತ್ತು ಕುದ್ರೋಳಿಯ ನೌಶಿನ್ ಕುಟುಂಬಗಳು ಇನ್ನೂ ಆ ದುಃಖದ ಛಾಯೆಯಿಂದ ಹೊರಬಂದಿಲ್ಲ.

ಸಂತ್ರಸ್ತ ಮನೆಗೆ ‘ವಾರ್ತಾಭಾರತಿ’ ತಂಡ ಭೇಟಿ ನೀಡಿದಾಗ ಜಲೀಲ್‌ರ ಪತ್ನಿ, ಪುತ್ರ, ಪುತ್ರಿ ಸಹಿತ ಕುಟುಂಬದ ಇತರ ಸದಸ್ಯರು ಅಂದಿನ ಘಟನೆಯನ್ನು ನೆನೆದು ಕಣ್ಣೀರಾದರು. ನಾವು ಮಾಡಿದ ತಪ್ಪಾದರೂ ಏನು? ನಮ್ಮವರನ್ನು ಪೊಲೀಸರು ಯಾಕೆ ಗುಂಡಿಕ್ಕಿ ಕೊಂದರು? ನಮಗಾದ ಅನ್ಯಾಯದ ಬಗ್ಗೆ ಮ್ಯಾಜಿಸ್ಟೀರಿಯಲ್ ಜಗದೀಶ್‌ರ ಮುಂದೆ ಹೇಳಿಕೆ ನೀಡಿದ್ದೇವೆ. ಅವರು ಸರಕಾರಕ್ಕೆ ಏನು ವರದಿ ನೀಡಿದ್ದಾರೆ ಗೊತ್ತಿಲ್ಲ. ಆದರೆ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಕುದ್ರೋಳಿಯ ನೌಶಿನ್‌ರ ತಾಯಿ ಯಾವ ತಾಯಿಗೂ ಇಂತಹ ಸ್ಥಿತಿ ಬಾರದಿರಲಿ ಎಂದು ಗದ್ಗದಿತರಾಗುತ್ತಾರೆ.

‘‘ಸರಕಾರ ನನ್ನ ಮಗನನ್ನು ಕೊಂದು ಹಾಕಿತು. ಸಾಲದ್ದಕ್ಕೆ ಅವರ ಮೇಲೆ ಕೇಸೂ ದಾಖಲಿಸಿತು. ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನೂ ತಡೆ ಹಿಡಿಯಿತು’’. ನಮಗೆ ಪರಿಹಾರ ಮುಖ್ಯವಲ್ಲ. ನಮಗೆ ನ್ಯಾಯ ಬೇಕು ಎಂದ ಜಲೀಲ್ ಮತ್ತು ನೌಶಿನ್ ಕುಟುಂಬದ ಸದಸ್ಯರು, ಕಷ್ಟಕಾಲದಲ್ಲಿ ನಮ್ಮನ್ನು ಮುಸ್ಲಿಂ ಸಂಘಟನೆಗಳು, ಸಮುದಾಯದ ನಾಯಕರು ಕೈ ಬಿಡಲಿಲ್ಲ. ಅವರ ಸಹಕಾರವನ್ನು ನಾವೆಂದೂ ಮರೆಯುವುದಿಲ್ಲ ಎಂದರು.

► ಜಲೀಲ್‌ರ ಮಕ್ಕಳ ದತ್ತು ಸ್ವೀಕಾರ: ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಬಂದರ್ ಕಂದುಕದ ಅಬ್ದುಲ್ ಜಲೀಲ್‌ರ ಇಬ್ಬರು ಮಕ್ಕಳನ್ನು ಕಾಸರಗೋಡಿನ ಜಾಮಿಅ ಸಅದಿಯ್ಯ ಅರಬಿಯ್ಯ ಸಂಸ್ಥೆ ದತ್ತು ಪಡೆಯುವುದಾಗಿ ಹೇಳಿದ್ದರೂ ಯೆನೆಪೊಯ ಸಮೂಹ ಸಂಸ್ಥೆ ಈ ಮಕ್ಕಳನ್ನು ದತ್ತು ಪಡೆಯುವ ಭರವಸೆ ನೀಡಿತ್ತು. ಅದರಂತೆ ಜಲೀಲ್‌ರ ಪುತ್ರ ಜಪ್ಪಿನಮೊಗರಿನಲ್ಲಿರುವ ಯೆನೆಪೊಯ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಮಗಳು ಮುಂದಿನ ವರ್ಷ ಪಿಯುಸಿಗೆ ಸೇರ್ಪಡೆಗೊಳ್ಳಲಿದ್ದಾಳೆ.

***************************

ಅಂದಿನ ಕಹಿ ಘಟನೆ ಇನ್ನೂ ಮನಸ್ಸಿನಿಂದ ಮಾಸಿಲ್ಲ. ತಂದೆಯನ್ನು ಯಾಕೆ ಕೊಂದರು ಅಂತ ನಮಗಿನ್ನೂ ಗೊತ್ತಾಗುತ್ತಿಲ್ಲ. ನಮಗೆ ನ್ಯಾಯ ಸಿಗಬೇಕಿದೆ.

► ಶಿಫಾನಿ- ಶಬೀಲ್, ಮೃತ ಜಲೀಲ್‌ರ ಮಕ್ಕಳು

***************************

ಯಾವೊಂದು ಪ್ರಕರಣದಲ್ಲೂ ಭಾಗಿಯಾಗದ ನನ್ನ ಪತಿಯನ್ನು ಪೊಲೀಸರು ವಿನಾ ಕಾರಣ ಕೊಂದು ಹಾಕಿದರು. ಆ ಬಳಿಕ ನಾನು ಪಟ್ಟ ಪಾಡು, ನೋವನ್ನು ಹೇಳಲಾಗದು.

► ಶಾಹಿದಾ, ಮೃತ ಜಲೀಲ್‌ರ ಪತ್ನಿ

***************************

ಪುತ್ರನ ಅಗಲಿಕೆ ಸಹಿಸಲು ಆಗುತ್ತಿಲ್ಲ. ನಾವು ಪರಿಹಾರ ಕೇಳುತ್ತಿಲ್ಲ. ಕೊಂದವರಿಗೆ ಶಿಕ್ಷೆಯಾಗಲಿ.

► ಮುಮ್ತಾಝ್, ಮೃತ ನೌಶಿನ್‌ರ ತಾಯಿ

***************************

ನಾನು ಯಾವುದೇ ಪ್ರತಿಭಟನೆ, ಕಾರ್ಯಕ್ರಮಕ್ಕೆ ಹೋದವನಲ್ಲ. ಸ್ವಂತ ಮನೆಯೂ ಇಲ್ಲದ ನಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಪೊಲೀಸರು ಗುಂಡೇಟಿನಿದಂ ಗಾಯಗೊಂಡ ಬಳಿಕ ನನ್ನ ಕೈಯಲ್ಲಿ ಬಲವೇ ಇಲ್ಲ. ದುಡಿಯಲು ಆಗುತ್ತಿಲ್ಲ. ಪತ್ನಿ-ಮಕ್ಕಳು ಉಪವಾಸ ಬೀಳುವ ಪರಿಸ್ಥಿತಿ ಇದೆ. ಮನೆ ಬಾಡಿಗೆ ಕಟ್ಟಲಾಗದೆ ಈಗ ಅತ್ತೆ ಮನೆಯಲ್ಲೇ ಇದ್ದೇನೆ. ಗುಂಡಿಕ್ಕಿದ್ದಲ್ಲದೆ ಪೊಲೀಸರು ನನ್ನ ಮೇಲೆ ಕೇಸು ಕೂಡ ದಾಖಲಿಸಿದ್ದಾರೆ. ಅದಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇನೆ. ಆಸ್ಪತ್ರೆಯ ಬಿಲ್ಲನ್ನು ಸಂಘಟನೆಯ ಮುಖಂಡರು ಪಾವತಿಸಿದ್ದಾರೆ.

► ಗುಂಡೇಟಿನಿಂದ ಗಾಯಗೊಂಡ ಓರ್ವ

***************************

ನಾನು ಹೊರ ಜಿಲ್ಲೆಯವ. ಮಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ನಾನು ಸ್ಕಾಲರ್‌ಶಿಪ್‌ಗಾಗಿ ಅಲೆದಾಡುತ್ತಿದ್ದೆ. ಆ ದಿನ ಅಹಿತಕರ ಘಟನೆ ನಡೆದ ವೇಳೆ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದೆ. ಅಷ್ಟರಲ್ಲಿ ಪೊಲೀಸರ ಗುಂಡೇಟು ಕಾಲಿಗೆ ಬಿತ್ತು. ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ. ಒಂದು ತಿಂಗಳು ಆಸ್ಪತ್ರೆಯಲ್ಲದ್ದೆ. ಈಗಲೂ ನನಗೆ ನಡೆಯಲು ಆಗುತ್ತಿಲ್ಲ. ಗಾಲಿ ಕುರ್ಚಿ ಬಳಸುತ್ತಿದ್ದೇನೆ. ಈ ಮಧ್ಯೆ ಪೊಲೀಸರು ನನ್ನ ಮೇಲೆಯೇ ಕೇಸು ದಾಖಲಿಸಿದ್ದಾರೆ. ಅದಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಶೈಕ್ಷಣಿಕ ಬದುಕು ಅರ್ಧದಲ್ಲೇ ಮೊಟಕುಗೊಂಡಿತು.

► ಪೊಲೀಸರ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿ

***************************

ಘಟನೆಯ ಸಂದರ್ಭ ಪೊಲೀಸ್ ಅಧಿಕಾರಿಗಳ ಮನವಿಯ ಮೇರೆಗೆ ಆಕ್ರೋಶಿತ ಜನರನ್ನು ಸಮಾಧಾನಪಡಿಸಲು ಸ್ಥಳಕ್ಕೆ ತೆರಳಿದ್ದ ನನ್ನ ತಲೆಗೆ ಗುಂಡೇಟು ಬಿದ್ದಿತ್ತು. ಆ ಘಟನೆಯನ್ನು ಮರೆಯಲು ಆಗುತ್ತಿಲ್ಲ. ನೋವಿನ ಸಂಗತಿ ಏನೆಂದರೆ ಮಂಗಳೂರು ಖಾಝಿಯವರು ದೌರ್ಜನ್ಯಕ್ಕೀಡಾದ ಸಮುದಾಯದ ಸಂತ್ರಸ್ತರ ಪರವಾಗಿ ನಿಲ್ಲದೆ, ಪೊಲೀಸರ ಪರವಾಗಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಹೇಳಿಕೆ ನೀಡಿರುವುದು. ಇದು ಪೊಲೀಸರಿಗೆ ವರದಾನವಾಗುವ ಸಾಧ್ಯತೆಯಿದೆ. ತಾನು ಪೊಲೀಸರ ಪರವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಬಹಿರಂಗಪಡಿಸಬೇಕಿದೆ. ಏನೇ ಆಗಲಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News