ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಸಾಣೂರು ಯುವಕ ಮಂಡಳ ಆಯ್ಕೆ
ಉಡುಪಿ, ಡಿ.19: ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಕಾರ್ಕಳ ತಾಲೂಕು ಸಾಣೂರು ಯುವಕ ಮಂಡಳವು 2019-20ನೇ ಸಾಲಿಗೆ ಆಯ್ಕೆಯಾಗಿದೆ.
ಯುವ ವ್ಯವಹಾರ ಹಾಗೂ ಯುವ ಸಬಲೀಕರಣ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿ ಆಯ್ಕೆ ಸಮಿತಿಯ ಡಿ.17ರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಸಾಣೂರು ಯುವಕ ಮಂಡಳವು 2019-2020ನೇ ಸಾಲಿಗೆ ರಾಜ್ಯಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಇದಕ್ಕೆ ಮೊದಲು ಉಡುಪಿ ಜಿಲ್ಲಾ ಮಟ್ಟದಲ್ಲೂ ಅದು ಅತ್ಯುತ್ತಮ ಯುವ ಮಂಡಳ ಪ್ರಶಸ್ತಿ ಪಡೆದಿತ್ತು.
ಪ್ರಶಸ್ತಿಯು 75 ಸಾವಿರ ರೂ. ನಗದು ಹಾಗೂ ಪ್ರಶಂಸ ಪತ್ರವನ್ನು ಒಳಗೊಂಡಿದ್ದು, ಮುಂದಿನ ಜನವರಿ 23ರಂದು ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪ್ರಶಸ್ತಿಯನ್ನು ವಿತರಿಸಲಿರುವರು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿ ಸೋಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.