ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಸೈಕಲ್ ರ್ಯಾಲಿ

Update: 2020-12-20 12:23 GMT

ಮಂಗಳೂರು, ಡಿ.20: ಅಪರಾಧ ತಡೆ ಸಪ್ತಾಹ ಹಾಗು ಮಾದಕ ದ್ರವ್ಯ ಸೇವನೆ ತಡೆ ಕುರಿತ ಜಾಗೃತಿ ಮೂಡಿಸುವ ಅಭಿಯಾನದ ಅಂಗವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ರವಿವಾರ ನಗರದಲ್ಲಿ ಸೈಕಲ್ ರ್ಯಾಲಿ ನಡೆಯಿತು.

ವಿಆರ್ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ನಡೆದ ರ್ಯಾಲಿಯಲ್ಲಿ 4 ವರ್ಷದ ಪೋರನಿಂದ ತೊಡಗಿ 62ರ ವೃದ್ಧರ ಸಹಿತ ಸುಮಾರು 50ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡರು.

ಈ ಸಂದರ್ಭ ನಗರದಲ್ಲಿ ಮಾದಕ ವ್ಯಸನವನ್ನು ದೂರವಾಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಫಲಕಗಳನ್ನು ಪ್ರದರ್ಶಿಸಲಾಯಿತು. ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ ರ್ಯಾಲಿಗೆ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಅವರು ಮಾದಕ ವ್ಯಸನ ಎನ್ನುವುದು ಸಾವಿನ ಬಲೆಯಾಗಿದ್ದು, ಈ ವ್ಯಸನದಿಂದ ಯುವಜನರು, ಮಕ್ಕಳ ಸಹಿತ ಎಲ್ಲರೂ ದೂರವಿರಬೇಕು. ನಗರದಲ್ಲಿ ಇತ್ತೀಚೆಗೆ ಈ ವ್ಯಸನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದರು.

ಈ ಸಂದರ್ಭ ವಿಆರ್ ಸೈಕ್ಲಿಂಗ್‌ನ ಅಧ್ಯಕ್ಷ ಸರ್ವೇಶ ಸಾಮಗ, ಉಪಾಧ್ಯಕ್ಷ ಶ್ಯಾಮ್‌ಪ್ರಸಾದ್ ನಾಯಕ್, ಬರ್ಕೆ ಇನ್‌ಸ್ಪೆಕ್ಟರ್ ಜ್ಯೋತಿಲಿಂಗ ಹೊನ್ನಕಟ್ಟೆ ಉಪಸ್ಥಿತರಿದ್ದರು.

ವಿಆರ್ ಸೈಕ್ಲಿಂಗ್‌ನ ಹಾರ್ನಿಶ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News