ಎಲ್‌ಐಸಿ ಖಾಸಗೀಕರಣದ ಹುನ್ನಾರ ಹೋರಾಟದಿಂದ ಸೋಲಿಸಲು ಸಾಧ್ಯ: ಜೆ. ಸುರೇಶ್

Update: 2020-12-20 13:29 GMT

ಉಡುಪಿ, ಡಿ.20: ತಪ್ಪು ಆರ್ಥಿಕ ನೀತಿಗಳಿಂದ ಉಂಟಾಗಿರುವ ಆರ್ಥಿಕ ಹಿಂಜರಿತಗಳಿಂದ ಕಂಗೆಟ್ಟಿರುವ ಕೇಂದ್ರ ಸರಕಾರವು ದೇಶದ ಆರ್ಥಿಕ ಪರಿಸ್ಥಿತಿ ಯನ್ನು ಸುಧಾರಿಸಲು ಸುಮಾರು 2.10ಲಕ್ಷ ಕೋಟಿಯಷ್ಟು ಬಂಡವಾಳವನ್ನು ಕ್ರೋಢೀಕರಿಸಲು ಮುಂದಾಗಿದ್ದು, ಈ ಉದ್ದೇಶಕ್ಕೆ ಎಲ್‌ಐಸಿಯ ಶೇ.10 ಷೇರು ಗಳನ್ನು ಬಂಡವಾಳಶಾಹಿಗಳಿಗೆ ವಿತರಿಸುವ ಮೂಲಕ ಸಾರ್ವಜನಿಕ ರಂಗದ ಎಲ್‌ಐಸಿಯನ್ನು ಖಾಸಗೀಕರಣ ಗೊಳಿಸಲು ಹೊರಟಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ ಹೈದರಾಬಾದ್ ಇದರ ಜೊತೆ ಕಾರ್ಯ ದರ್ಶಿ ಜೆ.ಸುರೇಶ್ ಆರೋಪಿಸಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ರವಿವಾರ ಆಯೋಜಿಸಲಾದ ವಿಮಾ ನೌಕರರ ಸಂಘ ಉಡುಪಿ ವಿಭಾಗದ 62ನೇ ವಿಭಾಗೀಯ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಎಲ್‌ಐಸಿ ಖಾಸಗೀಕರಣಗೊಳಿಸುವ ಪ್ರಕ್ರಿಯೆಯಿಂದ ಸರಕಾರ ಸುಮಾರು 1 ಲಕ್ಷ ಕೋಟಿಯಷ್ಟು ಬಂಡವಾಳವನ್ನು ಗಳಿಸುವ ಗುರಿಯನ್ನು ಹೊಂದಿದೆ. ಎಲ್‌ಐಸಿಯಲ್ಲಿ ವಿಶ್ವಾವ ಇಟ್ಟು ಜೀವವಿಮೆಯಲ್ಲಿ ಹಣ ವಿನಿಯೋಗಿಸಿರುವ 40ಕೋಟಿ ಪಾಲಿಸಿದಾರರು ಮತ್ತು ಸಂಸ್ಥೆಯಲ್ಲಿ ದುಡಿಯು ತ್ತಿರುವ ನೌಕರರ ಹಿತಾಸಕ್ತಿಗಳನ್ನು ಸರಕಾರ ಕಡೆಗಣಿಸುತ್ತಿದೆ. ಸಂಘಟಿತ ಹೋರಾಟಗಳಿಂದ ಸರಕಾರದ ಈ ನೀತಿಗಳನ್ನು ಸೋಲಿಸಲು ಸಾಧ್ಯ ಎಂದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಸಭೆಯಲ್ಲಿ ವಿಮಾ ಪಿಂಚಣಿದಾರರ ಸಂಘದ ಅಧ್ಯಕ್ಷ ಕೆ.ಆರ್.ಭಟ್, ಎಲ್‌ಐಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕುಶಲ ಕುಮಾರ್, ಉಡುಪಿ ಜಿಲ್ಲಾ ಸಿಐ ಟಿಯು ಕೋಶಾಧಿಕಾರಿ ಶಶಿಧರ ಗೊಲ್ಲ, ಸಂಘದ ಹಿರಿಯ ನಾಯಕ ಅದಮಾರು ಶ್ರೀಪತಿ ಆಚಾರ್ಯ, ಸಂಘದ ಮಹಿಳಾ ಸಂಚಾಲಕಿ ಪದ್ಮರೇಖಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘಟನೆಯಲ್ಲಿ ಸುಮಾರು 50ವರ್ಷಗಳ ಕಾಲ ದುಡಿದ ಹಿರಿಯ ನಾಯಕ ಪಿ.ವಿಶ್ವನಾಥ ರೈ ಮತ್ತು ಸಂಘದ ಮಾಜಿ ಮಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಬಿ.ಎನ್.ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸದಸ್ಯರು ಭಾಗವಹಿಸಿದ್ದರು.

ಸಂಘದ ಜತೆ ಕಾರ್ಯದರ್ಶಿ ಕವಿತಾ ಎಸ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ವಂದಿಸಿದರು.

ಕಾರ್ಮಿಕರು ನಿರುದ್ಯೋಗಿಗಳಾಗುವ ಪರಿಸ್ಥಿತಿ !

ಕಾರ್ಮಿಕ ಕಾನೂನುಗಳ ತಿದ್ದುಪಡಿಗಳಿಂದಾಗಿ ಕಾರ್ಮಿಕರು ತಮ್ಮ ಸಾಂವಿ ಧಾನಿಕ ಹಕ್ಕು ಮತ್ತು ಉದ್ಯೋಗದ ಭರವಸೆಯನ್ನು ಕಳೆದುಕೊಂಡು ನಿರುದ್ಯೋಗಿಗಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೆ.ಸುರೇಶ್ ಕಳವಳ ವ್ಯಕ್ತಪಡಿಸಿದರು.

ಸರಕಾರದ ಪ್ರಸ್ತುತ ಕೃಷಿ ನೀತಿಗಳು ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ವಲಯಕ್ಕೆ ವಹಿಸಿಕೊಡುವ ಉದ್ದೇಶವನ್ನು ಹೊಂದಿದ್ದು, ಇದ ರಿಂದ ದೇಶದ ಲಕ್ಷಾಂತರ ರೈತರು ನಿರ್ಗತಿಕರಾಗುವ ಅಪಾಯ ಇದೆ ಎಂದು ಎಚ್ಚರಿಸಿದ ಅವರು, ಈ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿಯು ಸರಕಾರದ ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳಿಗೆ ಸ್ಪಷ್ಟ ಉತ್ತರ ನೀಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News