ಬ್ಯಾಂಕ್ ಆಫ್ ಬರೋಡಾ : ಶಾಖೆಗಳ ಸಮನ್ವಯ ಪೂರ್ಣ

Update: 2020-12-20 14:42 GMT

ಮಂಗಳೂರು, ಡಿ.20: ಸರಕಾರಿ ಸ್ವಾಮ್ಯದ ಮೂರನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾ, ಹಿಂದಿನ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ ಎಲ್ಲ 3,898 ಶಾಖೆಗಳನ್ನು ತನ್ನಲ್ಲಿ ಸಮನ್ವಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಈ ಪ್ರಕ್ರಿಯೆಯಲ್ಲಿ ಒಟ್ಟು ಐದು ಕೋಟಿ ಗ್ರಾಹಕರ ಖಾತೆಗಳನ್ನು ವರ್ಗಾಯಿಸಿದಂತಾಗಿದೆ. ಬ್ಯಾಂಕ್ ಶಾಖೆಗಳ ಜತೆ ಎಲ್ಲ ಎಟಿಎಂ, ಪಿಓಒಎಸ್ ಯಂತ್ರ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಕೂಡ ಯಶಸ್ವಿಯಾಗಿ ವರ್ಗಾಯಿಸಲಾಗಿದೆ. ಈ ಯಶಸ್ವಿ ಸಮನ್ವಯದ ಬಳಿಕ ಎಲ್ಲ ಗ್ರಾಹಕರು ಇದೀಗ 8,248 ದೇಶೀಯ ಶಾಖೆಗಳು ಮತ್ತು 10,318 ಎಟಿಎಂಗಳ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಈ ಜಾಲ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾದ ಎಲ್ಲ ಉತ್ಪನ್ನ ಮತ್ತು ಸೇವೆಗಳ ಸಮಗ್ರ ಶ್ರೇಣಿಯನ್ನು ಒದಗಿಸಲಿದೆ. ಎಲ್ಲ ಗ್ರಾಹಕರಿಗೆ ಇದೀಗ ಬ್ಯಾಂಕ್ ಆಫ್ ಬರೋಡಾದ ಬರೋಡಾ ಕನೆಕ್ಟ್, ಎಂ-ಕನೆಕ್ಟ್ ಪ್ಲಸ್ ಮುಂತಾದ ಅತ್ಯಾಧುನಿಕ, ಬಳಕೆದಾರ ಸ್ನೇಹಿ ಮತ್ತು ಶಾಖೆ ಯಂಥ ಗುಣಲಕ್ಷಣಗಳನ್ನು ಹೊಂದಿರುವ ಡಿಜಿಟಲ್ ಚಾನಲ್‌ಗಳು ಲಭ್ಯ. ಗ್ರಾಹಕರು ತಮ್ಮ ಮನೆಗಳಲ್ಲೇ ಕುಳಿತು ಬ್ಯಾಂಕಿಂಗ್ ಸೇವೆಗಳನ್ನು ಆಸ್ವಾದಿಸಬಹುದಾಗಿದೆ.

ಈ ತಿಂಗಳು 1,770 ಶಾಖೆಗಳ ಸಮನ್ವಯಗೊಳಿಸುವಿಕೆ ಪೂರ್ಣಗೊಳಿಸಿದ್ದು, ಇದಕ್ಕೂ ಮುನ್ನ ಕಳೆದ ಸೆಪ್ಟಂಬರ್‌ನಲ್ಲಿ ಹಿಂದಿನ ವಿಜಯ ಬ್ಯಾಂಕ್‌ನ 2,128 ಶಾಖೆಗಳನ್ನು ಸಮನ್ವಯಗೊಳಿಸಿತ್ತು. ಎರಡೂ ಬ್ಯಾಂಕ್ ಶಾಖೆಗಳ ಸಮನ್ವಯವನ್ನು ಬ್ಯಾಂಕ್ ನಿಗದಿತ ಕಾಲಮಿತಿಗೆ ಮುನ್ನವೇ ಪೂರ್ಣಗೊಳಿಸಿದಂತಾಗಿದೆ.

ಖಾತೆಗಳು ವರ್ಗಾವಣೆಯಾಗಿರುವ ಗ್ರಾಹಕರು ತಮ್ಮ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸಂಕೇತದಂಥ ವಿವರಗಳನ್ನು ಯಾವುದೇ ಡಿಜಿಟಲ್ ಚಾನಲ್‌ಗಳನ್ನು ಬಳಸಿಕೊಂಡು ಅಥವಾ ಕಾಲ್ ಸೆಂಟರ್ ಅಥವಾ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ. ಹಿಂದಿನ ಬ್ಯಾಂಕ್‌ಗಳು ಈಗಾಗಲೇ ವಿತರಿಸಿದ ಡೆಬಿಟ್‌ಕಾರ್ಡ್‌ಗಳನ್ನು ಈಗ ಇರುವ ಅವಧಿಯ ವರೆಗೂ ಬಳಸಬಹುದಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿಇಒ ಸಂಜೀವ್ ಛಡ್ಡಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News