ಗ್ರಾಪಂ ಚುನಾವಣೆ : ಹಳೆಯಂಗಡಿ 2ನೇ ವಾರ್ಡ್‌ನಲ್ಲಿ ಸಹೋದರ ಸವಾಲ್

Update: 2020-12-20 16:47 GMT

ಮಂಗಳೂರು, ಡಿ.20: ಗ್ರಾಮ ಪಂಚಾಯತ್ ಚುನಾವಣೆಗೆ ಎರಡು ದಿನಗಳು ಬಾಕಿ ಇರುವಂತೆಯೇ ಸಹೋದರರು ನೇರ ಹಣಾಹಣಿಗೆ ಸಿದ್ಧರಾಗಿದ್ದು, ಚುನಾವಣೆ ತಯಾರಿಯಲ್ಲಿ ತೊಡಗಿದ್ದಾರೆ.

ಹೌದು. ಇದು ನಡೆದಿರುವುದು ದ.ಕ. ಜಿಲ್ಲೆಯ ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರದ 2ನೇ ವಾರ್ಡ್‌ನಲ್ಲಿ. ಸಹೋದರರು ಎದುರು ಬದುರಾಗಿ ಸ್ಪರ್ಧೆಗೆ ಸಜ್ಜಾಗಿದ್ದು, ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮತ್ತು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

ಇಂದಿರಾ ನಗರದ ಎರಡನೇ ವಾರ್ಡ್ ಸದ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಬ್ದುಲ್ ಖಾದರ್ ಸ್ಪರ್ಧಿಸುತ್ತಿದ್ದು, ಅದೇ ವಾರ್ಡ್‌ನಲ್ಲಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಹಾರಿಸ್ ಸ್ಫರ್ಧೆಗೆ ಇಳಿದ್ದಾರೆ. ಇವರೊಂದಿಗೆ ಇವರ ಮತ್ತೋರ್ವ ಸಹೋದರ ಅಬ್ದುಲ್ ಹಮೀದ್ ಪಕ್ಷೇತರರಾಗಿ ಉಮೇದು ವಾರಿಕೆ ಸಲ್ಲಿಸುವವರಿದ್ದು, ಬಳಿಕ ಹಿರಿಯರು ಹಾಗೂ ಸ್ನೇಹಿತರ ಮಾತಿಗೆ ಮಣಿದು ಚುನಾಚಣೆಗೆ ಸ್ಪರ್ಧಿಸುವುದನ್ನು ಕೈಬಿಟ್ಟಿದ್ದಾರೆ. ಈ ಮೂವರೂ ಸಹೋದರರು ಬೊಳ್ಳೂರಿನ ಮುಕ್ರಿ ಅಬ್ದುಲ್ ಖಾದರ್ ಅವರ ಮೊಮ್ಮಕ್ಕಳು.

ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್ ಮುಕ್ರಿಯವರ ಹಿರಿಯ ಪುತ್ರ ಮುಹಮ್ಮದ್ ಅವರ ಮಗನಾಗಿದ್ದರೆ, ಪಕ್ಷೇತರರಾಗಿ ಸ್ಪರ್ಧೆಗೆ ಸಜ್ಜಾಗಿದ್ದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್(ಅದ್ದಿ ಬೊಳ್ಳೂರು) ಅವರು ಮುಕ್ರಿಯವರ ಎರಡನೇ ಪುತ್ರನಾದ ಫಕ್ರುದ್ದೀನ್ ಅವರ ಪುತ್ರ ಮತ್ತು ಎಸ್‌ಡಿಪಿಐ ಬೆಂಬಲಿತ ಹಾರಿಸ್ ಮುಕ್ರಿಯವರ ಕಿರಿಯ ಪುತ್ರನಾಗಿರುವ ಅಂದುಞಿ ಅವರ ಪುತ್ರ.

ಇದೇ ಸಹೋದರರು ಕಳೆದ ಬಾರಿಯ ಗ್ರಾಪಂ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಆದರೆ, ಎಸ್‌ಡಿಪಿಐ ಬೆಂಬಲಿತ ಹಾರಿಸ್ ಕೆಲವೇ ಮತಗಳ ಅಂತರದಿಂದ ಕಳೆದ ಬಾರಿ ಸೋಲು ಅನುಭವಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್ ಜಯ ಗಳಿಸಿದ್ದರು. ಅಲ್ಲದೆ, ಖಾದರ್ ಅವರು ಕಳೆದ ನಾಲ್ಕು ಬಾರಿ ಸತತವಾಗಿ ಈ ಭಾಗದಲ್ಲಿ ಗೆಲುವು ಪಡೆಯುತ್ತಾ ಬಂದಿದ್ದಾರೆ.

ಅಂದಹಾಗೆ, ಹಳೆಯಂಗಡಿ ಎರಡನೇ ವಾರ್ಡ್ ಇಂದಿರಾನಗರದಲ್ಲಿ ಒಟ್ಟು 866 ಮತಗಳಿವೆ.ಮತದಾರರು ಇವರಲ್ಲಿ ಯಾರ ಕೈಹಿಡಿಯಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News