ಯೆನಪೋಯ ಆಸ್ಪತ್ರೆಯಲ್ಲಿ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ

Update: 2020-12-21 11:52 GMT

ಕೊಣಾಜೆ : ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳ ತಂಡದಿಂದ ಸುಮಾರು ನಾಲ್ಕು ವರ್ಷ ಮಗುವಿಗೆ ಕಾಲಿನ ತೊಡೆಯಲ್ಲಿ ಕ್ಯಾನ್ಸರ್ ಭಾದಿತ ಎಲುಬಿನ ಅಸ್ಥಿಮಜ್ಜೆಯ ಕ್ಯಾನ್ಸರಿನ, ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು ಇದೊಂದು ಅಪರೂಪದ ಮತ್ತು ಭಾರತದಲ್ಲೇ ಪ್ರಥಮ ಶಸ್ತ್ರಚಿಕಿತ್ಸೆಯಾಗಿದೆ ಎಂದು ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷರಾದ ಡಾ.ಪದ್ಮನಾಭ ಅವರು  ಹೇಳಿದರು.

ಅವರು ಯೆನೆಪೋಯ ಮೆಡಿಕಲ್ ಕಾಲೇಜಿ‌ನಲ್ಲಿ  ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ ನಾಲ್ಕು ವರ್ಷದ ಮಗುವಿನ ಕುಟುಂಬವು ಈ ಸಮಸ್ಯೆಯ ಬಗ್ಗೆ ಅರಿವಾಗಿ ಭಾರತದ ಹಲವಾರು ಪರಿಣಿತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರನ್ನು ಸಂದರ್ಶಿಸಿದಾಗ ಕ್ಯಾನ್ಸರ್ ಭಾಧಿತ ಕಾಲಿನ ಭಾಗವನ್ನು ತುಂಡರಿಸುವುದು ಎಂಬುದೇ ಪರಿಹಾರ ಎಂದು ತಿಳಿಸಿದ್ದರು.

ಬಳಿಕ ಯೆನಪೋಯ ಮೆಡಿಕಲ್ ಕಾಲೇಜಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಲಾಲುದ್ದೀನ್ ಅಕ್ಬರ್  ಅವರನ್ನು ಭೇಟಿ ಮಾಡಿ ವಿಚಾರಿಸಿದ್ದರು. ಬಳಿಕ ಉಪಕುಲಪತಿ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದೊಂದಿಗೆ ಕಾಲು ಕತ್ತರಿಸದೆಯೇ ಮಗುವಿಗೆ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು.‌ ಬಳಿಕ ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿ ಮಗುವಿನ ಕಾಲು ಮತ್ತು ಜೀವವನ್ನು ರಕ್ಷಿಸುವ ಪಣದೊಂದಿಗೆ ಅಪರೂಪದ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

ಸುಮಾರು ಒಂದುವರೇ ಲಕ್ಷ ವೆಚ್ಚದಲ್ಲಿ ಆರು ಗಂಟೆಯ ಚಿಕಿತ್ಸೆಯನ್ನು ಯಶಸ್ವಿಯಾಗಿ‌ ನಡೆಸಲಾಗಿದ್ದು, ಅಲ್ಲದೆ ಇಂತಹ ಕ್ಯಾನ್ಸರ್ ಪೀಡಿತ ಕಾಲಿನ ಅಂಗನ್ಯೂನ್ಯತೆ ಸರಿಪಡಿಸುವ ಬಹಳ ವಿರಳವಾಗಿ ನಡೆಯುವ ಶಸ್ತ್ರಚಿಕಿತ್ಸೆಯನ್ನು ಯೆನೆಪೋಯದ ಪರಿಣಿತ ವೈದ್ಯರುಗಳ ತಂಡವು ಯಶಸ್ವಿಯಾಗಿ ನಡೆಸಿ ನಾಲ್ಕು ವರ್ಷಗಳ ಮಗುವಿನ ಕಾಲು ಹಾಗೂ ಜೀವದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಯೆನೆಪೋಯ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ಡಾ.ರೋಹನ್ ಶೆಟ್ಟಿ, ಡಾ. ಅಮರ್ ರಾವ್, ಡಾ.ನೂರ್ ಮಹಮ್ಮದ್, ಆರ್ಥೋಪೆಡಿಕ್ಸ್ ವಿಭಾಗ ಮುಖ್ಯಸ್ಥರಾದ ಡಾ. ಇಮ್ತಿಯಾಝ್ ಅಹ್ಮದ್, ಡಾ. ಅಭಿಷೇಕ್ ಶೆಟ್ಟಿ, ಅರಿವಳಿಕೆ ವಿಭಾಗದ ಡಾ.ಎಜಾಝ್, ಮಕ್ಕಳ ಚಿಕಿತ್ಸಾ ವಿಭಾಗದ ಡಾ.ಮಿಥುನ್ ಪಾಲ್ಗೊಂಡಿದ್ದರು.

ಭಾರತದಲ್ಲೇ ಪ್ರಥಮ

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ. ಜಲಾಲುದ್ದೀನ್ ಅಕ್ಬರ್ ಅವರು ಮಾಹಿತಿ ನೀಡಿ ಸಾಮಾನ್ಯವಾಗಿ ಇಂತಹ ಕ್ಯಾನ್ಸರ್ ಭಾದಿತ ಚಿಕಿತ್ಸೆ ಯನ್ನು ಕಾಲುಗಳನ್ನು ಕತ್ತರಿಸಿಯೇ ಪರಿಹಾರ  ಕಂಡುಕೊಳ್ಳುವುದು ಕಾಣುತ್ತೇವೆ. ರೋಗಭಾದಿತ ಅಂಗಗಳ ಛೇದನ ಮಾಡದೆಯೇ ಪರಿಣಿತ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ಪರಿಕರ ಮತ್ತು ಉಪಕರಣಗಳಿಂದ  ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರುಗಳ ಸಾಧನೆಯಾಗಿದೆ. ಅಲ್ಲದೆ ಇದು ಬಹಳ ಅಪರೂಪದ ಮತ್ತು ಭಾರತದಲ್ಲಿ ಇಷ್ಟು ಸಣ್ಣ ವಯಸ್ಸಿನ ಮಕ್ಕಳಲ್ಲಿ ಇಂತಹ ಚಿಕಿತ್ಸೆ ನಡೆದಿರುವುದು ಇದೇ ಪ್ರಥಮ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News