ಬ್ರಿಟನ್‌ನಿಂದ ಮಂಗಳೂರಿಗೆ 56 ಪ್ರಯಾಣಿಕರ ಆಗಮನ

Update: 2020-12-22 17:06 GMT

ಮಂಗಳೂರು, ಡಿ.22: ಬ್ರಿಟನ್ ರಾಷ್ಟ್ರದಲ್ಲಿ ಈಗಾಗಲೇ ಕೊರೋನ ಮಾದರಿಯ ಎರಡನೇ ಅಲೆ ಆರ್ಭಟಿಸುತ್ತಿದ್ದು, ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸಿವೆ. ಇದೇ ವೇಳೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿ ಕೊರೋನದ 2ನೇ ಅಲೆ ಭೀತಿ ಹುಟ್ಟಿಸಿದೆ.

ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾಹಿತಿ ಹಂಚಿಕೊಂಡ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ, ಬ್ರಿಟನ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬ್ರಿಟನ್ ಏರ್‌ವೇಸ್, ಇಂಡಿಯನ್ ಏರೈಲೈನ್ಸ್ ಸಹಿತ ವಿವಿಧ ವಿಮಾನಯಾನ ಸೇವಾ ಸಂಸ್ಥೆಗಳ ಮೂಲಕ ಪ್ರಯಾಣಿಸಿದ್ದಾರೆ. ಡಿ.7ರಿಂದ ಇಲ್ಲಿಯವರೆಗೆ 56 ಮಂದಿ ಬಂದಿದ್ದಾರೆ. ಡಿ.21ರಂದೇ 15 ಮಂದಿ ಮಂಗಳೂರು ತಲುಪಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲಕ ಮಂಗಳೂರಿಗೆ ಬಂದವರಾಗಿದ್ದಾರೆ ಎಂದರು.

ಈಗಾಗಲೇ ಮೂವರನ್ನು ಸಂಪರ್ಕಿಸಲಾಗಿದ್ದು, ಡಿ.23ರಂದು ಬೆಳಗ್ಗೆ 9 ಗಂಟೆಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಬೆಳಗ್ಗೆ 11 ಗಂಟೆಯೊಳಗೇ ಪರೀಕ್ಷೆ ಮುಗಿಯಲಿದೆ. ಸಂಜೆ 5ರಿಂದ 6 ಗಂಟೆಯೊಳಗೆ ವರದಿ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ವಿದೇಶದಿಂದ ಮಂಗಳೂರಿಗೆ ಆಗಮಿಸಿದ ಎಲ್ಲರನ್ನೂ ಪರೀಕ್ಷೆಗೆ ಒಳಡಿಸಲು ವ್ಯಾಪಕ ಪರಿಶ್ರಮ ಪಡಲಾಗುತ್ತಿದೆ. ಈಗಾಗಲೇ ಮೂವರು ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಂಗಳೂರಿಗೆ ಆಗಮಿಸಿದ ಎಲ್ಲರನ್ನೂ ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ತಾಯ್ನಡಿಗೆ ವಾಪಸಾಗುವ ಎಲ್ಲ ಪ್ರಯಾಣಿಕರನ್ನು ಮತ್ತೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುವುದು. 14 ದಿನಗಳ ಕ್ವಾರಂಟೈನ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯ ಜನತೆ ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಮಂಗಳೂರು ಏರ್‌ಪೋರ್ಟ್ ನಲ್ಲಿ ತಪಾಸಣೆ

ಬ್ರಿಟನ್‌ನಿಂದ ಮಂಗಳೂರಿಗೆ ಪ್ರಯಾಣಿಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ತಪಾಸಣೆ ವ್ಯಾಪಕ ಚುರುಕು ಪಡೆದಿದೆ.

ಲಂಡನ್‌ನಿಂದ ನೇರವಾಗಿ ಯಾವುದೇ ವಿಮಾನ ಇದುವರೆಗೆ ಮಂಗಳೂರಿಗೆ ಬಂದಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಪ್ರಯಾಣಿಕರ ಥರ್ಮಲ್ ಸ್ಕಾನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಮಂಗಳೂರು ಏರ್‌ಪೋರ್ಟ್‌ಗೆ ದುಬೈನಿಂದ ವಾರಕ್ಕೆ ಮೂರು ವಿಮಾನ, ದಮಾಮ್‌ನಿಂದ ಒಂದು ವಿಮಾನ ಸಂಚಾರವಿದೆ.

ದೇಶದೊಳಗಿನ ಪ್ರಮುಖ ನಗರಗಳಿಗೂ ವಿಮಾನಗಳು ಸಂಚರಿಸುತ್ತಿವೆ. ಕ್ವಾರಂಟೈನ್ ನಿಯಮ ಇಲ್ಲದೇ ಇರುವುದರಿಂದ ಇದುವರೆಗೆ ಬಂದವರೆಲ್ಲರೂ ಕ್ವಾರಂಟೈನ್‌ಗೆ ಒಳಗಾಗಿಲ್ಲ. ಇನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲು ಜಿಲ್ಲಾಡಳಿತ ಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News