ದ.ಕ. ಜಿಲ್ಲೆ : ಡಿ. 27ರಂದು ದ್ವಿತೀಯ ಹಂತದ ಗ್ರಾಪಂ ಚುನಾವಣೆ; 3,421 ಅಭ್ಯರ್ಥಿಗಳು ಕಣದಲ್ಲಿ

Update: 2020-12-26 14:51 GMT

ಮಂಗಳೂರು, ಡಿ.26: ದ.ಕ.ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ರವಿವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, 3,421 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 1541 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ ರವಿವಾರ 1,500 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅನುಸೂಚಿತ ಜಾತಿಯ 371, ಅನುಸೂಚಿತ ಪಂಗಡದ 272, ಹಿಂದುಳಿದ ‘ಅ’ ವರ್ಗದ 699, ಹಿಂದುಳಿದ ‘ಬಿ’ ವರ್ಗದ 138, ಸಾಮಾನ್ಯ 1,921 ಅಭ್ಯರ್ಥಿಗಳು ಸೇರಿದ್ದಾರೆ.

ನಿಷೇಧಾಜ್ಞೆ ಜಾರಿ

ಡಿ.27ರಂದು ನಡೆಯುವ ಗ್ರಾಪಂ ಎರಡನೆ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಡಿ.27ರ ಸಂಜೆ 5 ಗಂಟೆಯವರೆಗೆ ಮತದಾನ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೆಶಿಸಿದ್ದಾರೆ.

ಹಾಗಾಗಿ ಮತದಾನ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಮತದಾನ ಕಾರ್ಯಕ್ಕೆ ಬರುವ ಮತದಾರರನ್ನು ಹೊರತುಪಡಿಸಿ ಇತರ ವ್ಯಕ್ತಿ ಗಳು ಸಕಾರಣವಿಲ್ಲದೇ 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು, ಯಾವುದೇ ಆಯುಧ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News