2ನೆ ಹಂತದ ಕೋವಿಡ್ ಸಿದ್ಧತೆ ವೈಜ್ಞಾನಿಕ ಆಧಾರದಲ್ಲಿರಲಿ: ಶಾಸಕ ಖಾದರ್

Update: 2020-12-26 17:40 GMT

ಮಂಗಳೂರು, ಡಿ.26: ರಾಜ್ಯದಲ್ಲಿ ಎರಡನೆ ಹಂತದ ಕೋವಿಡ್ ಕುರಿತಂತೆ ಜನಸಾಮಾನ್ಯರ ಆತಂಕಕ್ಕೆ ಪೂರಕವಾಗಿ ವೈಜ್ಞಾನಿಕ ಆಧಾರದಲ್ಲಿ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್ ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ನೈಟ್ ಕರ್ಫ್ಯೂಗೆ ಸಂಬಂಧಿಸಿ 48 ಗಂಟೆಗಳಲ್ಲಿ ಸರಕಾರ ಮೂರು ಬಾರಿ ತನ್ನ ಆದೇಶ ಬದಲಾಯಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿತ್ತು. ಸರಕಾರ ಜನರ ಆರೋಗ್ಯದ ಬಗ್ಗೆ ಕೈಗೊಳ್ಳುವ ತೀರ್ಮಾನ ವೈಜ್ಞಾನಿಕ ಆಧಾರದಲ್ಲಿರಬೇಕೇ ಹೊರು ರಾಜಕೀಯವಾಗಿರಬಾರದು ಎಂದರು.

2ನೆ ಹಂತದ ಕೋವಿಡ್ ಎದುರಿಸಲು ಸರಕಾರ ಯಾವ ಸಿದ್ಧತೆ ನಡೆಸಿದೆ, ಜನರಿಗೆ ಯಾವ ರೀತಿಯಲ್ಲಿ ಜಾಗೃತಿ ನೀಡಲಿದೆ ಎಂಬ ಕುರಿತು ಸರಕಾರದ ವೈಜ್ಞಾನಿಕ ಸಮಿತಿ ನೀಡಿರುವ ವರದಿಯನ್ನು ಜನರಿಗೆ ತಿಳಿಸಬೇಕಾಗಿದೆ. ಇದೇ ವೇಳೆ ಲಸಿಕೆ ನೀಡುವ ಕುರಿತಂತೆಯೂ ಸ್ಪಷ್ಟತೆ ಯನ್ನು ನೀಡಬೇಕು. ಸರಕಾರ ನೀಡುವ ಲಸಿಕೆ ಡ್ರಗ್ ಕಂಟ್ರೋಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿದೆಯೇ, ಇದು ಕೋವಿಡ್ ನಿಯಂತ್ರಿಸು ವಲ್ಲಿ ಎಷ್ಟು ಶೇಕಡಾವಾರು ಪರಿಣಾಮಕಾರಿ, ಇದರ ವೆಚ್ಚ ಭರಿಸುವುದು ಹೇಗೆ ಹಾಗೂ ಇದನ್ನು ಜನಸಾಮಾನ್ಯರಿಗೆ ನೀಡುವ ವ್ಯವಸ್ಥೆ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದವರು ಹೇಳಿದರು.

ಪ್ರಸ್ತುತ ಆಯುಷ್ಮಾನ್ ಯೋಜನೆಯಡಿ ಐಸಿಯುಗೆ ದಾಖಲಾದ ಕೋವಿಡ್ ರೋಗಿಗೆ ಮಾತ್ರವೇ ಸೌಲಭ್ಯ ದೊರೆಯುತ್ತಿದೆ. ಆದರೆ ಮುಂದೆ ಒಂದು ವೇಳೆ ಕೋವಿಡ್ ಮತ್ತೆ ವ್ಯಾಪಕವಾದಲ್ಲಿ ಆಯುಷ್ಮಾನ್‌ನಡಿ ಚಿಕಿತ್ಸೆ ದೊರೆಯದೆ ಜನಸಾಮಾನ್ಯರು ತೊಂದರೆಗೊಳಗಾಗಬಹುದು. ಹಾಗಾಗಿ ಹಿಂದಿನಂತೆಯೇ ಕೋವಿಡ್ ರೋಗಿಗಳಿಗೆ ಆಯುಷ್ಮಾನ್‌ನಡಿ ಚಿಕಿತ್ಸೆ ದೊರೆಯುವಂತಹ ಆದೇವನ್ನು ಹೊರಡಿಸಬೇಕು ಎಂದರು.

ಶಿಕ್ಷಣಕ್ಕೆ ಸಂಬಂಧಿಸಿಯೂ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಯು.ಟಿ.ಖಾದರ್, ಪದವಿ ತರಗತಿ ಗಳನ್ನು ಆರಂಭಗೊಳಿಸಲಾಗಿದ್ದರೂ, ಆಫ್‌ಲೈನ್, ಆನ್‌ಲೈನ್ ಎಂಬ ಗೊಂದಲದಿಂದಾಗಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಗೊಂದಲ್ಲಿದ್ದು, ಈ ಬಗ್ಗೆ ಸ್ಪಷ್ಟತೆಯನ್ನು ಸರಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ರೌಡಿಗಳ ಅಟ್ಟಹಾಸ, ಕೊಲೆ, ಹಲ್ಲೆ, ದರೋಡೆ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಮುಸ್ತಫಾ, ಜಬ್ಬಾರ್, ಆಯ್ಯೂಬ್, ಉಸ್ಮಾನ್, ಗಿರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News