ಶಿಕ್ಷಣ ಸಂಸ್ಥೆಗಳು ಭವಿಷ್ಯದ ಕನಸುಗಳನ್ನು ಸೃಷ್ಟಿಸುವ ಕೇಂದ್ರವಾಗಲಿ: ಪ್ರೊ. ವೆಲೇರಿಯನ್ ರಾಡ್ರಿಗಸ್

Update: 2020-12-27 10:05 GMT

ಕೊಣಾಜೆ, ಡಿ.27: ಶಿಕ್ಷಣ ಸಂಸ್ಥೆಗಳು ಭವಿಷ್ಯದ ಕನಸುಗಳನ್ನು ಸೃಷ್ಟಿಸುವ ಕೇಂದ್ರವಾಗಬೇಕು. ಶಿಕ್ಷಣದೊಂದಿಗೆ ನಮ್ಮಲ್ಲಿರುವ ಕೌಶಲ್ಯ ಹಾಗೂ ಶಿಸ್ತು, ಮಾನವೀಯ ಮೌಲ್ಯಗಳು ಉತ್ತಮ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ವೆಲೇರಿಯನ್ ರಾಡ್ರಿಗಸ್ ಹೇಳಿದರು.

ಅವರು  ರವಿವಾರ ಇನೋಳಿಯಲ್ಲಿರುವ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ 8ನೇ ಮತ್ತು ಬ್ಯಾರೀಸ್ ಎನ್ವಿರೊ ಆರ್ಕಿಟೆಕ್ಚರ್ ಸ್ಕೂಲ್ (ಬೀಡ್ಸ್)ನ ಪ್ರಥಮ ಪದವಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೂ ಪ್ರಮುಖವಾದುದು. ಪದವಿ ಶಿಕ್ಷಣವು ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿದೆ. ನಮ್ಮ ಸಾಮರ್ಥ್ಯದೊಂದಿಗೆ ನಾವು ಕಲಿತ ಶಿಕ್ಷಣ ಸಂಸ್ಥೆಗಳಿಂದ ನಾವು ಸಮಾಜದಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.

ಬ್ಯಾರೀಸ್ ಕ್ಯಾಂಪಸ್ ಪರಿಸರವು ವಿದ್ಯಾರ್ಥಿಗಳಿಗೆ ಉತ್ತಮ ಪೂರಕ  ಶೈಕ್ಷಣಿಕ ವಾತವಾರಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಕೀರ್ತಿ ಇನ್ನಷ್ಟು ಜಗತ್ತಿನುದ್ದಕ್ಕೂ ಪಸರಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ ನ ನಿರ್ದೇಶಕಿ ಡಾ.ದೀಪಿಕಾ ಶೆಟ್ಟಿ ಪದವಿ ದಿನಾಚರಣೆ ಭಾಷಣ ಮಾಡಿದರು. ಲೋಧಾ ಗ್ರೂಪ್ ಮುಂಬೈನ ಉಪಾಧ್ಯಕ್ಷ ಗಣೇಶ್ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ, ಯುವ ಪದವೀಧರರು ಜೀವನದಲ್ಲಿ ಸ್ಪಷ್ಟ ಧ್ಯೇಯ, ಸಾಧಿಸುವ ತುಡಿತ ಹಾಗೂ ಸತತ ಪ್ರಯತ್ನದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮ ಹೆತ್ತವರನ್ನು, ಕುಟುಂಬ ಸದಸ್ಯರನ್ನು ಅತ್ಯಂತ ಗೌರವದಿಂದ ಕಾಣಬೇಕು ಹಾಗೂ ಇತರರ ಬಗ್ಗೆ ಕಾಳಜಿ ಹಾಗೂ ಮಮತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ. ಮಂಜೂರ್ ಭಾಷಾ ಸ್ವಾಗತಿಸಿದರು. ಬೀಡ್ಸ್ ಪ್ರಾಂಶುಪಾಲ ಅಶೋಕ ಎಲ್ ಪಿ. ಮೆಂಡೋನ್ಸ ವಂದಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News