ಡಿ. 28: ಪಡುಬಿದ್ರೆ ಬ್ಲೂ ಫ್ಲ್ಯಾಗ್ ಕಡಲ ತೀರದಲ್ಲಿ ಧ್ವಜಾರೋಹಣ

Update: 2020-12-27 15:57 GMT

ಉಡುಪಿ, ಡಿ.27: ಅಂತಾರಾಷ್ಟ್ರೀಯ ಬ್ಲೂಫ್ಲಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿಯ ಎಂಡ್ ‌ಪಾಯಿಂಟ್‌ನ ಬ್ಲೂ ಫ್ಲ್ಯಾಗ್ ಕಡಲ ತೀರದ (ಬೀಚ್) ಧ್ವಜಾರೋಹಣ ಕಾರ್ಯಕ್ರಮ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತ ಸರಕಾರದ ಪರಿಸರ ಮಂತ್ರಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಸೊಸೈಟಿ ಆಫ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎಸ್‌ಐಸಿಓಎಂ) ಹಾಗೂ ಹೊಸದಿಲ್ಲಿಯ ಎ ಟು ಝಡ್ ಇಋಫ್ರಾ ಸರ್ವಿಸ್‌ನ ಸಂಯುಕ್ತ ಸಹಯೋಗದಲ್ಲಿ ಈ ಕಾರ್ಯಕ್ರಮ ಪಡುಬಿದ್ರಿ ಎಂಡ್ ‌ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸುವರು. ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಆನಂದಸಿಂಗ್ ಹಾಗೂ ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಕರ್ನಾಟಕ ರಾಜ್ಯದ ಪಡುಬಿದ್ರಿ ಎಂಡ್ ‌ಪಾಯಿಂಟ್ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಸಮೀಪದ ಕಾಸರಕೋಡು ಬೀಚ್‌ಗಳು ಸೇರಿದಂತೆ ದೇಶದ ಒಟ್ಟು ಎಂಟು ಸುಂದರ ಬೀಚ್‌ಗಳು ಡೆನ್ಮಾರ್ಕ್ ಮೂಲದ ಪರಿಸರ ಶಿಕ್ಷಣ ಫೌಂಡೇಷನ್‌ನಿಂದ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದಿವೆ.

ದೇಶದ 13 ಬೀಚ್‌ಗಳು ಇಂಥ ಮಾನ್ಯತೆಗೆ ಅರ್ಜಿ ಹಾಕಿದ್ದು, ಈ ಪೈಕಿ ರಾಷ್ಟ್ರೀಯ ಆಯ್ಕೆ ಸಮಿತಿ ಎಂಟು ಬೀಚ್‌ಗಳನ್ನು ಅಂತಾರಾಷ್ಟ್ರೀಯ ಆಯ್ಕೆಗಾರ ಸಮಿತಿಗೆ ಶಿಫಾರಸ್ಸು ಮಾಡಿದ್ದು, ಈ ಎಲ್ಲಾ ಬೀಚ್‌ಗಳಿಗೂ ಡೆನ್ಮಾರ್ಕ್‌ನ ಎಫ್‌ಇಇ ಸಂಸ್ಥೆ ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ನೀಡಿದೆ.

ಪರಿಸರ ಸ್ನೇಹಿ ವಾತಾವರಣ, ಸ್ವಚ್ಛ ಬೀಚ್, ಬೀಚಿನ ಸುರಕ್ಷತೆ, ಕಡಲ ನೀರಿನ ಗುಣಮಟ್ಟ, ಪ್ರವಾಸಿಗರಿಗೆ ನೀಡುವ ಮೂಲಭೂತ ಸೌಕರ್ಯ, ಅನುಕೂಲತೆಗಳು ಸೇರಿದಂತೆ ಒಟ್ಟು 33 ಅಂಶಗಳನ್ನು ಪರಿಶೀಲಿಸಿ ಸಮಿತಿ ಈ ಮಾನ್ಯತೆ ನೀಡುತ್ತದೆ. ಈ ಮಾನ್ಯತೆ ಪಡೆದ ಬೀಚ್‌ಗಳ ಕಡಲ ತೀರದಲ್ಲಿ ನೀಲಿನ ಬಣ್ಣದ ಧ್ವಜವನ್ನು ಹಾರಿಸಲಾಗುತ್ತದೆ.

ಬೀಚ್‌ಗಳು ಪ್ರವಾಸಿಗರ ಭೇಟಿಗೆ ಅತ್ಯಂತ ಸುರಕ್ಷಿತ ತಾಣವೆಂದು ಪರಿಗಣಿಸ ಲ್ಪಡುತ್ತದೆ. ಹೀಗಾಗಿ ಇಂಥ ಬೀಚ್‌ಗಳಿಗೆ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆ ಯಲ್ಲಿ ಭೇಟಿ ನೀಡುತ್ತಾರೆ. ಇದರೊಂದಿಗೆ ಪರಿಸರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೂ ವಿಪುಲ ಅವಕಾಶಗಳು ತೆರೆದು ಕೊಳ್ಳುತ್ತವೆ.

ಪಡುಬಿದ್ರಿ ಬೀಚ್‌ನಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಪ್ರವಾಸಿಗರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ.ತ್ಯಾಜ್ಯ ವಿಲೇವಾರಿಗೆ ಎಸ್‌ಎಲ್‌ಆರ್‌ಎಂ ಘಟಕವಿದೆ. ವಿಶಾಲವಾದ ಉದ್ಯಾನವನ, ಮಕ್ಕಳ ಆಟಕ್ಕೆ ಬೇಕಾದ ಎಲ್ಲಾ ಸೌಕರ್ಯ, ಶುದ್ಧ ಕುಡಿಯುವ ನೀರಿನ ಘಟಕ, ಪ್ರವಾಸಿಗರಿಗೆ ವ್ಯವಸ್ಥಿತವಾದ ಶೌಚಾಲಯ, ಬಟ್ಟೆ ಬದಲಾವಣೆಗೆ ಡ್ರೆಸ್ಸಿಂಗ್ ರೂಮ್ ಸೌಲಭ್ಯವನ್ನು ಒದಗಿಸಲಾಗಿದೆ.

ಪಡುಬಿದ್ರಿ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗೂ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಬೀಚ್‌ನ ಎಲ್ಲಾ ಕಡೆಗಳಲ್ಲೂ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಭದ್ರತೆಗೆ ವಿಶೇಷ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ನಾಳೆ ಧ್ವಜಾರೋಹಣದ ಮೂಲಕ ಪಡುಬಿದ್ರೆಯ ಎಂಡ್‌ ಪಾಯಿಂಟ್ ಬೀಚ್ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಬೀಚ್ ಮಾನ್ಯತೆಯ್ನು ಅಧಿಕೃತವಾಗಿ ಪಡೆದುಕೊಳ್ಳಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News