ಇಂಟಕ್‌ನಿಂದ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ
ಮಂಗಳೂರು, ಡಿ.28: ಇಂಟಕ್ ಹಾಗೂ ಯೂತ್ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ರೆಡ್‌ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಲೇಡಿಗೋಶನ್ ಆಸ್ಪತ್ರೆ ಸಹಯೋಗದೊಂದಿಗೆ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಇಂಟಕ್ ನಾಯಕ ರಾಕೇಶ್ ಮಲ್ಲಿ ಅವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮ ನಗರದ ಪುರಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೇಂದ್ರ ಸರಕಾರ ಅನುಸರಿಸುತ್ತಿರುವ ಕಾರ್ಮಿಕ, ರೈತ ವಿರೋಧಿ ನೀತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರು ಹಾಗೂ ರೈತರಿಗೆ ಬೆಂಬಲವಾಗಿ ನಿಲ್ಲುವ ಸಂಕಲ್ಪ ತೊಡಬೇಕು ಎಂದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ ಗಳಿಸಿಕೊಟ್ಟ ಪಕ್ಷವಾಗಿದ್ದು ಸತ್ಯ, ಶಾಂತಿ, ಅಹಿಂಸೆ ಮೂಲಕವೂ ಗೆಲುವು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ದೇಶದ ಏಕತೆ, ಬಡತನ ನಿವಾರಣೆಗೆ ಕಾಂಗ್ರೆಸ್ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎಂದವರು ಹೇಳಿದರು.
ಕೇಂದ್ರದ ವಿರುದ್ಧ ಅಭಿಯಾನ
ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರು ಮಾತನಾಡಿ, ಕೇಂದ್ರ ಸರಕಾರ ದೇಶದ ಕೈಗಾರಿಕೆ, ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಇದರಿಂದಾಗಿ ದೇಶದ ಜನತೆಗೆ ಉದ್ಯೋಗ ಇಲ್ಲದಂತಾಗಿದೆ. ಇದು ಕಳವಳಕಾರಿ ವಿಚಾರವಾಗಿದೆ. ಇಂಟಕ್‌ನ್ನು ಇನ್ನಷ್ಟು ಬಲಪಡಿಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ, ಮಾಜಿ ಮೇಯರ್‌ಗಳಾದ ಭಾಸ್ಕರ್ ಮೊಲಿ, ಶಶಿಧರ ಹೆಗ್ಡೆ, ಕವಿತಾ ಸನಿಲ್, ಯುವ ಇಂಟಕ್ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಎಸ್.ಕೆ, ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಕೋಡಿಜಾಲ್ ಇಬ್ರಾಹಿಂ, ತೇಜಸ್ವಿ ರಾಜ್, ಮಹಾಬಲ ಮಾರ್ಲ, ವಿಶ್ವಾಸ್ ದಾಸ್, ಲಕ್ಷ್ಮೀ ವೆಂಕಟೇಶ್, ಸಿ.ಎ. ರಹೀಂ, ಬಿ.ಕೆ.ಸುರೇಶ್, ಅಬೂಬಕರ್, ಯುವ ಇಂಟಕ್ ಅಧ್ಯಕ್ಷರಾದ ಪುನೀತ್ ಶೆಟ್ಟಿ, ಚಿರಂಜೀವಿ ಅಂಚನ್, ಶಿಪಾಲ್‌ರಾಜ್, ಸಂಪತ್ ಲೋಬೋ, ಪದ್ಮಸ್ಮಿತ್ ಅಧಿಕಾರಿ, ಹರೀಶ್ ರಾವ್, ಸಿದ್ದಿಕ್ ಹಸನ್, ಮೋಹನ್ ಕೋಟ್ಯಾನ್, ಜಯಪ್ರಕಾಶ್, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಯುವ ಇಂಟಕ್ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಸ್ವಾಗತಿಸಿದರು. ದ.ಕ ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ವಂದಿಸಿದರು. ಸಾಹಿಲ್ ರೈ ಮತ್ತು ಬೊಂಡಾಲ ಚಿತ್ತರಂಜನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.