ಶಿರಾಡಿ ಸುರಂಗ ಮಾರ್ಗದಿಂದ ಸರಕು ನಿರ್ವಹಣೆ ಹೆಚ್ಚಳ : ವೆಂಕಟ ರಮಣ ಅಕ್ಕರಾಜು
ಮಂಗಳೂರು, ಡಿ.29: ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಶಿರಾಡಿ ಸುರಂಗ ಮಾರ್ಗ ಸೇರಿದಂತೆ ಇತರ ಘಾಟಿ ಹೆದ್ದಾರಿಗಳ ಮಹತ್ವದ ಕಾಮಗಾರಿಗಳು ಕಾರ್ಯಗತಗೊಂಡರೆ ನವಮಂಗಳೂರು ಬಂದರಿ(ಎನ್‌ಎಂಪಿಟಿ)ನ ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದು ನವಮಂಗಳೂರು ಬಂದರು ಮಂಡಳಿಯ ಅಧ್ಯಕ್ಷ ವೆಂಕಟ ರಮಣ ಅಕ್ಕರಾಜು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಸ್ತುತ ಎನ್‌ಎಂಪಿಟಿಯು ವರ್ಷಕ್ಕೆ 68 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆಯ ಗುರಿ ಹೊಂದಿದ್ದರೂ ಸಮರ್ಪಕ ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ಈ ಗುರಿಯನ್ನು ತಲುಪಲಾಗುತ್ತಿಲ್ಲ. ಶಿರಾಡಿ ಸುರಂಗ ಮಾರ್ಗ ಕಾರ್ಯಗತವಾದರೆ ಅತಿ ಕಡಿಮೆ ಅವಧಿಯಲ್ಲಿ ಸರಕು ಸಾಗಾಟ ಸಾಧ್ಯತೆ ಜತೆಗೆ ನಿರ್ವಹಣೆುಲ್ಲಿಯೂ ಹೆಚ್ಚಳವಾಗಲಿದೆ ಎಂದರು.
ಶಿರಾಡಿ, ಚಾರ್ಮಾಡಿ, ಸಂಪಾಜೆ ಹೆದ್ದಾರಿಗಳಿದ್ದರೂ ಮಳೆಗಾಲದ ಸಂದರ್ಭದಲ್ಲಿ ಭೂಕುಸಿತ ಮತ್ತಿತರ ಕಾರಣಗಳಿಂದ ಈ ರಸ್ತೆಗಳನ್ನು ಬಳಸಲಾಗುವುದಿಲ್ಲ. ಶಿರಾಡಿ ಘಾಟಿ ಸುರಂಗ ಮಾರ್ಗ ಸರ್ವಋತು ರಸ್ತೆಯಾಗಲಿರುವ ಕಾರಣ ಇದು ಕಾರ್ಯಗತಗೊಂಡರೆ 2025ರ ವೇಳೆಗೆ ಕನಿಷ್ಠ 45 ಮಿ.ಮೆ.ಟನ್ ಸರಕು ನಿರ್ವಹಣೆ ಸಾಧ್ಯವಾಗಲಿದೆ. 2033ರ ವೇಳೆಗೆ ಕನಿಷ್ಠ 77 ಮೆಟ್ರಿಕ್ ಟನ್ ಸರಕು ನಿರ್ವಣೆ ಮಾಡಬಹುದು ಎಂದು ತಿಳಿಸಿದರು
ಶಿರಾಡಿ ಘಾಟಿ ಸುರಂಗ ಮಾರ್ಗ ಆದರೆ ಪಶ್ಚಿಮ ಘಟ್ಟದಲ್ಲಿರುವ ಪ್ರಾಣಿಗಳು ಹಾಗೂ ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ನಿರ್ಮಾಣ ವಾಗಲಿದೆ. ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳಿಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದು ಕರ್ನಾಟಕದ ವಿವಿಧ ಭಾಗಗಳಿಗೆ ಸರಕು ಸಾಗಾಟಕ್ಕೆ ಪೂರಕವಾಗಿದ್ದರೆ, ಗೋವಾ ಗಡಿಯಿಂದ ಕೇರಳ ಗಡಿಯವರೆಗೆ 3443 ಕೋಟಿ ರು. ವೆಚ್ಚದ 278 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ಆಗುವುದರಿಂದ ಬೇಲೇಕೇರಿ, ಕಾರವಾರ ಬಂದರುಗಳೊಂದಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ ಎಂದು ವೆಂಕಟರಮಣ ಅಕ್ಕರಾಜು ತಿಳಿಸಿದರು.
69 ಕೋಟಿ ರು. ವೆಚ್ಚದ ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಮುಂದಿನ ಹಂತದಲ್ಲಿ ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ ಕೈಗಾರಿಕಾ ಮತ್ತು ಇತರ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿದರೆ ವಾಹನ ದಟ್ಟಣೆಯೊಂದಿಗೆ ಅಪಘಾತಗಳನ್ನೂ ತಪ್ಪಿಸಬಹುದು ಎಂದವರು ಸಲಹೆ ನೀಡಿದರು.
ಪ್ರಸ್ತುತ ಹಣಕಾಸು ವರ್ಷದಲ್ಲಿ ಡಿ.25ರವರೆಗೆ ಎನ್‌ಎಂಪಿಟಿ 25.53 ಮಿ.ಮೆ.ಟನ್ ಸರಕು ನಿರ್ವಹಣೆ ಮಾಡಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 27.23 ಮಿ.ಮೆ.ಟನ್ ಸರಕು ನಿರ್ವಹಣೆ ಮಾಡಿದೆ. ಈ ಬಾರಿ ಕೊರೋನಾ ಕಾರಣದಿಂದ ನಿರ್ವಹಣೆ ತುಸು ಕುಂಠಿತವಾಗಿದ್ದು, ಮುಂದಿನ ಅವಧಿಯಲ್ಲಿ ಸರಕು ನಿರ್ವಹಣೆ ಹೆಚ್ಚಳವಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಅಕ್ಕರಾಜು ಹೇಳಿದರು.
ಸಿಐಐ ಅಧ್ಯಕ್ಷ ಪ್ರಕಾಶ್ ಕಲ್ಬಾವಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.