ಉಡುಪಿ ಗ್ರಾಪಂ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭ

Update: 2020-12-29 16:09 GMT

ಉಡುಪಿ, ಡಿ. 29: ಕಳೆದ ಡಿ.22 ಮತ್ತು 27ರಂದು ಉಡುಪಿ ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ದಂತೆ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ ಹಾಗೂ ಕಾಪು ತಾಲೂಕುಗಳಲ್ಲಿ ಡಿ.30ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭಗೊಳ್ಳಲಿದ್ದು, ಇದಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದ ಅವರು, ಬೆಳಗ್ಗೆ 8 ಕ್ಕೆ ಮತ ಎಣಿಕೆ ಕಾರ್ಯವು ಗ್ರಾಪಂ ಕ್ಷೇತ್ರವಾರು, ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದರು.

ಮತ ಎಣಿಕೆ ಕೇಂದ್ರದಲ್ಲಿ ಆಯಾ ಗ್ರಾಪಂಗಳ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಅಥವಾ ಅವರ ಮತ ಎಣಿಕೆ ಒಬ್ಬ ಏಜೆಂಟರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಇದಕ್ಕಾಗಿ ಅಧಿಕೃತ ಪಾಸನ್ನು ತಹಶೀಲ್ದಾರ್ ಮೂಲಕ ಹೊಂದಿರಬೇಕಾಗಿದೆ ಎಂದರು.

ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು ತಾಲೂಕುಗಳ 863 ಕ್ಷೇತ್ರಗಳ 1136 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದೆ. ಇವುಗಳ ಎಣಿಕೆಗೆ ಒಟ್ಟು 284 ಮೇಜುಗಳನ್ನು ಹಾಗೂ 948 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಗದೀಶ್ ನುಡಿದರು.

ಉಡುಪಿಯಲ್ಲಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ, ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ, ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಹೆಬ್ರಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ, ಕಾರ್ಕಳದಲ್ಲಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಕಾಪುವಿನಲ್ಲಿ ದಂಡತೀರ್ಥ ಪದವಿ ಪೂರ್ವ ಕಾಲೇಜಿ ನಲ್ಲಿ ಮತಗಳ ಎಣಿಕೆ ನಡೆಯಲಿದೆ.

ಉಡುಪಿಯಲ್ಲಿ 121 ಕ್ಷೇತ್ರ, 161 ಮತಗಟ್ಟೆಗಳು, 40 ಎಣಿಕಾ ಮೇಜುಗಳು ಹಾಗೂ 132 ಎಣಿಕೆಗೆ ಸಿಬ್ಬಂದಿಗಳಿರುತ್ತಾರೆ. ಬ್ರಹ್ಮಾವರದಲ್ಲಿ 153-194-48 -159, ಬೈಂದೂರಿನಲ್ಲಿ 93-128-31-105, ಹೆಬ್ರಿಯಲ್ಲಿ 48-60-16-54, ಕುಂದಾಪುರದಲ್ಲಿ 203-266-68-228, ಕಾರ್ಕಳದಲ್ಲಿ 145-187-48- 159, ಕಾಪುವಿನಲ್ಲಿ 100-140-33-111 ಸಿಬ್ಬಂದಿಗಳಿರುತ್ತಾರೆ.

ಮತ ಎಣಿಕೆ ಕೇಂದ್ರದ ಸುತ್ತಲೂ 200ಮೀ. ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಯನ್ನು ಜಾರಿಗೊಳಿಸಲಾಗಿದೆ. ಉಡುಪಿ ಮತ್ತು ಬೈಂದೂರಿನಲ್ಲಿ ಎರಡು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರ ದೊಳಗೆ ಯಾರಿಗೂ ಮೊಬೈಲ್ ತರಲು ಅವಕಾಶವಿಲ್ಲ. ತಾಲೂಕು ಕೇಂದ್ರಗಳು ಇಂದು ರಾತ್ರಿಯಿಂದ ನಾಳೆ ರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಅದೇ ರೀತಿ ವಿಜಯೋತ್ಸವಕ್ಕೂ ಅವಕಾಶವಿಲ್ಲ. ಮೆರವಣಿಗೆ ಕೊಂಡೊಯ್ಯುವಂತಿಲ್ಲ. ಪಟಾಕಿಯನ್ನು ನಿಷೇಧಿಸಲಾಗಿದೆ. ಮತ ಎಣಿಕಾ ಕೇಂದ್ರದೊಳಗೆ ಯಾರಾದರೂ ಮಾಸ್ಕ್ ತೆಗೆದರೆ ಅವರನ್ನು ಕೂಡಲೇ ಹೊರ ಕಳುಹಿಸಲು ಆರ್‌ಓಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News