ಬಂಟ್ವಾಳ: ಮಾಧ್ಯಮದವರಿಗೆ ಗ್ರಾಪಂ ಚುನಾವಣೆಯ ಫಲಿತಾಂಶದ ಮಾಹಿತಿ ನೀಡದ ಅಧಿಕಾರಿಗಳು

Update: 2020-12-30 08:05 GMT

ಬಂಟ್ವಾಳ, ಡಿ.30: ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್ ಗಳ ಫಲಿತಾಂಶ ಗಳು ಪ್ರಕಟವಾಗುತ್ತಿದ್ದರೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ ಫಲಿತಾಂಶದ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳು ಮಾಧ್ಯಮದವರಿಗೆ ನೀಡದೆ ಸತಾಯಿಸುತ್ತಿದ್ದಾರೆ.

ಮಧ್ಯಾಹ್ನ 1 ಗಂಟೆ ಕಳೆದರೂ ಇದುವರೆಗೆ ಒಂದೇ ಒಂದು ಗ್ರಾಮ ಪಂಚಾಯತ್ ಗಳ ಫಲಿತಾಂಶಗಳ ವಿವರವನ್ನು ಅಧಿಕಾರಿಗಳು ಮಾಧ್ಯಮದವರಿಗೆ ನೀಡಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೆ ತಾಲೂಕು ಚುನಾವಣಾ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಿದ್ದಾರೆ.

ಮತ ಎಣಿಕೆ ಕೇಂದ್ರದ ಕೆಳ ಅಂತಸ್ತಿನಲ್ಲಿ ಮಾಧ್ಯಮದವರಿಗೆ ಒಂದು ಕೊಠಡಿಯನ್ನು ನೀಡಿದ್ದು ಇಲ್ಲಿಗೆ ಯಾವುದೇ ಮೈಕ್ ವ್ಯವಸ್ಥೆಯನ್ನಾಗಲೀ, ಫಲಿತಾಂಶದ ವಿವರವನ್ನು ತಲುಪಿಸುವ ವ್ಯವಸ್ಥೆಯನ್ನಾಗಲಿ ಮಾಡಿಲ್ಲ.

ಅಲ್ಲದೆ ಲ್ಯಾಪ್ ಟಾಪ್, ಮೊಬೈಲ್ ಚಾರ್ಜ್ ಮಾಡುವ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಕೂಡಾ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಚುನಾವಣಾ ಅಧಿಕಾರಿಗಳ ಬಳಿ ಕೇಳಿದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮೊದಲ ಸುತ್ತಿನ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಕಾರ್ಯ 10:15ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆ ಕಳೆದರೂ ಇನ್ನೂ ಮೊದಲ ಸುತ್ತಿನ ಮತ ಎಣಿಕೆಯೇ ಮುಗಿದಿಲ್ಲ.

ಬಂಟ್ವಾಳ ತಾಲೂಕಿನ ಮತ ಎಣಿಕೆ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದ್ದು ಕಂಡು ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News