ಮಾಧ್ಯಮ ಮೇಲಿನ ವಿಶ್ವಾಸ ಉಳಿಯಲು ವಸ್ತುನಿಷ್ಠ ವರದಿ ಅಗತ್ಯ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2021-01-02 03:59 GMT

ಮಂಗಳೂರು, ಡಿ.31: ಜನರು ಮಾಧ್ಯಮದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗಲು ವಸ್ತುನಿಷ್ಠ ವರದಿಗಳ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರಗಿದ 2019ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸರಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿರುವ, ಜನರ ಪ್ರತಿಕ್ರಿಯೆ ಹಾಗೂ ಆಡಳಿತ ವರ್ಗ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ವಿಮರ್ಶಾತ್ಮಕ ವರದಿಗಳು ಮಾಧ್ಯಮದಲ್ಲಿ ಬಂದಾಗ ಆಡಳಿತಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಮಾಧ್ಯಮ ಮತ್ತು ಪೊಲೀಸ್ ಇಲಾಖೆಯ ನಡುವಿನ ಸಂಪರ್ಕ ಉತ್ತಮ ರೀತಿಯಲ್ಲಿದೆ. ಪೊಲೀಸರ ಬಗ್ಗೆ ಜನರಿಗೆ ಇರುವ ಭಯದ ವಾತಾವರಣ ಹೋಗಲಾಡಿಸಲು ಇಂತಹ ಸಂವಹನ ಅಗತ್ಯ ಎಂದರು.

ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು. ಹಾಗೂ ತೀರ್ಪುಗಾರರಲ್ಲೋರ್ವರಾದ ಉಪನ್ಯಾಸಕಿ ಜಯಶ್ರೀ ಹಾಗೂ ಪ್ರಶಸ್ತಿ ವಿಜೇತರು ಅನಿಸಿಕೆ ವ್ಯಕ್ತಪಡಿಸಿದರು.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.


ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2019ನೆ ಸಾಲಿನ ಪ.ಗೋ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು ಮತ್ತು ಕೊಡಗಿನ ಕಾವೇರಿ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ ಬೊಳ್ಳಜಿರ ಬಿ.ಅಯ್ಯಪ್ಪ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 ಪ್ರಶಸ್ತಿಯ ಮೊತ್ತವನ್ನು ಎಂ.ಫ್ರೆಂಡ್ಸ್ ಗೆ ದೇಣಿಗೆ ನೀಡಿದ ಕೋಟ್ಯಾನ್ 
ವಿಜಯ ಕೋಟ್ಯಾನ್  ತಮಗೆ ದೊರೆತ ಪ್ರಶಸ್ತಿಯ ಮೊತ್ತವನ್ನು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌‌ ಪ್ರತಿದಿನ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜತೆಗಾರರಿಗೆ ರಾತ್ರಿ ಊಟ ನೀಡುವ 'ಕಾರುಣ್ಯ' ಯೋಜನೆಯ ಖರ್ಚಿಗಾಗಿ ದೇಣಿಗೆಯಾಗಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News