ಪಾಕಿಸ್ತಾನ ಪರ ಘೋಷಣೆ ವೀಡಿಯೋ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಎಸ್‌ಡಿಪಿಐ ಆಗ್ರಹ

Update: 2021-01-01 12:27 GMT

ಮಂಗಳೂರು, ಜ.1:ನಮ್ಮ ಕಾರ್ಯಕರ್ತರು ಎಸ್‌ಡಿಪಿಐ ಪರ ಘೋಷಣೆ ಕೂಗಿದ್ದಾರೆ ಹೊರತು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ. ಈ ಪ್ರಕರಣದಲ್ಲಿ ಬಂಧಿತ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡದೇ ಇದ್ದರೆ ಮೂರು ದಿನಗಳ ಬಳಿಕ ಎಸ್ಪಿ ಕಚೇರಿಗೆ ಪ್ರತಿಭಟನಾ ಜಾಥ ನಡೆಸಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ತಿರುಚಿದ ವೀಡಿಯೋ ಒಂದರಲ್ಲಿ ಪಾಕಿಸ್ತಾನ ಪರ ಘೋಷಣೆ ಇದೆ ಎಂದು ಆರೋಪಿಸಿ ಎಸ್‌ಡಿಪಿಐ ಯ ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರ ಹಿಂದೆ ಎಸ್‌ಡಿಪಿಐ ಬೆಳವಣಿಗೆಯನ್ನು ಸಹಿಸದೆ ಇರುವವರ ಷಡ್ಯಂತ್ರ ಇದೆ. ಈ ಹಿಂದೆ‌ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ರೀತಿಯ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಿರುಚಿದ ವೀಡಿಯೋ ಪೊಲೀಸರಿಗೆ, ಮಾಧ್ಯಮಗಳಿಗೆ ಎಲ್ಲಿಂದ ಬಂದಿದೆ ಎನ್ನುವ ಸತ್ಯ ವಿಚಾರ ಬಹಿರಂಗವಾಗಬೇಕು. ಈ ಹಿಂದೆ ಸಂಘ ಪರಿವಾರದ ಮುಖಂಡರೊಬ್ಬರು ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಇದೇ ಸಂಘಟನೆಯ ವತಿಯಿಂದ ಈ ರೀತಿಯ ಷಡ್ಯಂತ್ರ ನಡೆಯುತ್ತಿದೆ. ಎಸ್‌ಡಿಪಿಐ ಗೆ ಪಾಕಿಸ್ತಾನ ಪರ ಘೋಷಣೆಯಿಂದ ಯಾವುದೇ ಲಾಭ ಇಲ್ಲ. ಈ ರೀತಿಯ ಘಟನೆ ಹಿಂದೆಯೂ  ರಾಜ್ಯದ ವಿವಿಧ ಕಡೆ ನಡೆದಿದೆ ಎಂದು ಅಶ್ರಫ್ ಮಾಚಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ರಿಯಾಝ್ ಫರಂಗಿಪೇಟೆ, ಎಸ್‌ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಘಟಕದ ಅಧ್ಯಕ್ಷ ಹೈದರ್ ನಿರ್ಸಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News