ಉಡುಪಿ: ದ್ವಿತೀಯ ಪಿಯುಸಿಗೆ ಶೇ.60.80, ಎಸೆಸೆಲ್ಸಿ, ವಿದ್ಯಾಗಮಕ್ಕೆ ಶೇ.49.43 ಹಾಜರಾತಿ

Update: 2021-01-01 15:41 GMT

ಉಡುಪಿ, ಜ.1: ರಾಜ್ಯ ಸರಕಾರದ ಸೂಚನೆಯಂತೆ ಸುಮಾರು 10 ತಿಂಗಳ ಬಳಿಕ 2020-21ನೇ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಕಾಲೇಜುಗಳು ಇಂದಿನಿಂದ ಆರಂಭಗೊಂಡವು. ಅದೇ ರೀತಿ ಆರರಿಂದ 9ನೆ ತರಗತಿವರೆಗಿನ ಮಕ್ಕಳ ವಿದ್ಯಾಗಮ-2 ಕಾರ್ಯಕ್ರಮಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಚಾಲನೆ ನೀಡಲಾಯಿತು.

ಜಿಲ್ಲೆಯ ಒಟ್ಟು 105(42 ಸರಕಾರಿ, 18 ಅನುದಾನಿತ, 43 ಖಾಸಗಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದವರ್ಗಗಳ ಇಲಾಖೆ ತಲಾ ಒಂದು) ಪದವಿ ಪೂರ್ವ ಕಾಲೇಜುಗಳ ಒಟ್ಟು 15768 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೈಕಿ 9677(ಶೇ.60.80) ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. 6091 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಹಾಜರಾದವರಲ್ಲಿ 4212 ಬಾಲಕರು ಮತ್ತು 5465 ಬಾಲಕಿಯರು ಇದ್ದಾರೆ. ಕಲಾ ವಿಭಾಗದ 1748 ವಿದ್ಯಾರ್ಥಿಗಳಲ್ಲಿ 1010(ಶೇ.57.78), ವಿಜ್ಞಾನ ವಿಭಾಗದ 5048 ವಿದ್ಯಾರ್ಥಿಗಳಲ್ಲಿ 3113(ಶೇ.61.66), ವಾಣಿಜ್ಯ ವಿಭಾಗದ 8481 ವಿದ್ಯಾರ್ಥಿಗಳಲ್ಲಿ 5175(ಶೇ.61.01) ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.

ಜಿಲ್ಲೆಯ 820(473 ಸರಕಾರಿ, 205 ಅನುದಾನಿತ, 142 ಖಾಸಗಿ) ಶಾಲೆಗಳ ಆರನೆ ತರಗತಿಯಿಂದ ಎಸೆಸೆಲ್ಸಿವರೆಗಿನ ಒಟ್ಟು 66514 ವಿದ್ಯಾರ್ಥಿ ಗಳ ಪೈಕಿ 32878 ವಿದ್ಯಾರ್ಥಿಗಳು ಇಂದು ತರಗತಿಗಳಿಗೆ ಹಾಜರಾದರು. ಈ ಮೂಲಕ ಶೇ.49.43 ಹಾಜರಾತಿ ದಾಖಲಾಗಿದೆ. ಇದರಲ್ಲಿ 33636 ಮಕ್ಕಳು ಗೈರು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.

ಸಂಭ್ರಮ ವಾತಾವರಣ: ಶಾಲೆ ಆರಂಭದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಶಾಲೆಗಳನ್ನು ತಳೀರು ತೋರಣ, ಬಲೂನ್‌ಗಳಿಂದ ಶೃಂಗರಿಸಲಾಗಿತ್ತು. ಇದರಿಂದ ಶಾಲೆಗಳಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ಕೆಲವು ಶಾಲೆಗಳಲ್ಲಿ ಬ್ಯಾಂಡ್ ವಾದ್ಯಗಳ ಮೂಲಕ ಮಕ್ಕಳನ್ನು ಮೆರವಣಿಗೆ ಯಲ್ಲಿ ಶಾಲೆಗೆ ಕರೆದುಕೊಂಡು ಬರಲಾಯಿತು. ಇನ್ನು ಕೆಲವೆಡೆ ಶಿಕ್ಷಕರು ಚಪ್ಪಲೆ ತಟ್ಟಿ ಮಕ್ಕಳನ್ನು ಸ್ವಾಗತಿಸಿದರು. ಅದೇ ರೀತಿ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರ ಮಾಡಿಕೊಳ್ಳಲಾಯಿತು. ಅಲ್ಲದೆ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿ, ಮಾಸ್ಕ್‌ಗಳನ್ನು ವಿತರಿಸಲಾಯಿತು.

ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಲೇಖನ ಸಾಮಾಗ್ರಿಗಳನ್ನು ನೀಡಿ ಸ್ವಾಗತಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ತಾಪಮಾನ ತಪಾಸಣೆ, ಸ್ಯಾನಿಟೈಸ್ ಮಾಡಿ ತರಗತಿ ಒಳಗೆ ಪ್ರವೇಶ ಕಲ್ಪಿಸಲಾಯಿತು. ಕೋವಿಡ್ ವೈರಸ್ ರಂಗೋಲಿ ದಾಟಿ ಬರುವುದರೊಂದಿಗೆ ಕೊರೋನ ಜಾಗೃತಿ ಮೂಡಿಸಲಾಯಿತು. ಪ್ರೌಢ ಮತ್ತು ಪಿಯು ತರಗತಿಗಳಿರುವಲ್ಲಿ ಬೆಳಗ್ಗೆ ಎಸೆಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಅವಕಾಶ ನೀಡಲಾಯಿತು.
ಕೇವಲ ಪ್ರೌಢಶಾಲೆಗಳಿರುವಲ್ಲಿ ಎಂಟು ಮತ್ತು ಒಂಭತ್ತನೆ ತರಗತಿಯವರಿಗೆ ದಿನ ಬಿಟ್ಟು ದಿನ ತರಗತಿ ನಡೆಸಲಾಯಿತು. ಕೆಲವು ಕಡೆ ವಿದ್ಯಾಗಮ ಕಾರ್ಯ ಕ್ರಮವನ್ನು ಮಧ್ಯಾಹ್ನ ವೇಳೆ ನಡೆಸಲಾಯಿತು. ಮಕ್ಕಳು ತುಂಬಾ ಖುಷಿಯಲ್ಲಿ ಮತ್ತು ಲವಲವಿಕೆಯಿಂದ ತರಗತಿಗೆ ಆಗಮಿಸುತ್ತಿರುವುದು ಕಂಡುಬಂತು.

ಜಿಪಂ ಸಿಇಓ ಭೇಟಿ: ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಡಾ.ನವೀನ್ ಭಟ್ ಮಣಿಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದೇ ರೀತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವು ಶಾಲೆಗಳಲ್ಲಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ವಿಠಲ ಶೆಟ್ಟಿ, ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅನಂತರಾವ್ ಬಲ್ಲಾಳ್, ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಾಲಾ ಮುಖ್ಯ ಶಿಕ್ಷಕ ಸುರೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ತೆರೆಯದ ಮುನಿಯಾಲು ಶಾಲೆ!
ಶಾಲೆ ಆರಂಭದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಶಿಕ್ಷಕರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಬ್ರಹ್ಮಾವರ ಶಾಲೆ ಯೊಂದರ ಶಿಕ್ಷಕ ಮತ್ತು ಹೆಬ್ರಿ ಮುನಿಯಾಲು ಶಾಲೆಯ ಕ್ಲರ್ಕ್‌ಗೆ ಪಾಸಿಟಿವ್ ಬಂದಿತ್ತು.
ಬ್ರಹ್ಮಾವರ ಶಾಲೆಯ ಶಿಕ್ಷಕರು ಇತರ ಶಿಕ್ಷಕರನ್ನು ಸಂಪರ್ಕಿಸದ ಹಿನ್ನೆಲೆಯಲ್ಲಿ ಆ ಶಾಲೆಯನ್ನು ಇಂದು ಆರಂಭಿಸಲಾಗಿತ್ತು. ಆದರೆ ಮುನಿಯಾಲು ಶಾಲೆಯ ಕ್ಲರ್ಕ್ ಅಲ್ಲಿನ ಏಳು ಮಂದಿ ಶಿಕ್ಷಕರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಶಾಲೆ ಆರಂಭವನ್ನು ಮುಂದೂಡಲಾಗಿದೆ ಎಂದು ಎನ್.ಎಚ್.ನಾಗೂರ ತಿಳಿಸಿದರು.

ಸರಕಾರಿ ಶಾಲೆಯಲ್ಲಿ ಅತಿಹೆಚ್ಚು ಹಾಜರಾತಿ
ಜಿಲ್ಲೆಯ 473 ಸರಕಾರಿ ಶಾಲೆಗಳ 26698 ವಿದ್ಯಾರ್ಥಿಗಳಲ್ಲಿ 15893 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಅತ್ಯಂತ ಹೆಚ್ಚು ಅಂದರೆ ಶೇ.59.53 ರಷ್ಟು ಹಾಜರಾತಿ ಕಂಡುಬಂದಿದೆ. 142 ಖಾಸಗಿ ಶಾಲೆಗಳ 27190 ವಿದ್ಯಾರ್ಥಿಗಳಲ್ಲಿ 10041 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಅತ್ಯಂತ ಕಡಿಮೆ ಅಂದರೆ ಶೇ.36.93 ಹಾಜರಾತಿ ದಾಖಲಾಗಿದೆ. 205 ಅನುದಾನ ರಹಿತ ಶಾಲೆಗಳ 12626 ಮಕ್ಕಳಲ್ಲಿ 6944 ವಿದ್ಯಾರ್ಥಿಗಳು ಆಗಮಿಸುವ ಮೂಲಕ ಶೇ.55 ಹಾಜರಾತಿ ದಾಖಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಮಕ್ಕಳ ಸಂಖ್ಯೆ ಇರುವ ಕೆಲವೊಂದು ಪದವಿ ಪೂರ್ವ ಕಾಲೇಜುಗಳಲ್ಲಿ ಬೆರಳಣಿಕೆ ಮಕ್ಕಳು ಹಾಜರಾದ ಕಾರಣ ತರಗತಿಯನ್ನು ನಾಳೆಗೆ ಮುಂದೂಡಲಾಗಿದೆ. ಕೋವಿಡ್-19 ನಿಯಮ ಪಾಲನೆಯೊಂದಿಗೆ ಕಾಲೇಜುಗಳಲ್ಲಿ ತರಗತಿಯನ್ನು ನಡೆಸಲಾಗಿದೆ. ಎಲ್ಲೂ ಯಾವುದೇ ಗೊಂದಲ, ಸಮಸ್ಯೆಗಳು ಉಂಟಾಗಿಲ್ಲ.
-ಭಗವಂತ ಕಟ್ಟಿಮನಿ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ.

ಮಕ್ಕಳು ತುಂಬಾ ಲವಲವಿಕೆಯಿಂದ ಶಾಲೆಗೆ ಆಗಮಿಸಿ ತರಗತಿಯಲ್ಲಿ ಪಾಲ್ಗೊಂಡಿರುವುದು ಕಂಡುಬಂತು. ಮಕ್ಕಳನ್ನು ಭೇಟಿ ಮಾಡಿದ ಸಂದರ್ಭ ದಲ್ಲಿ ಮಕ್ಕಳು ಶಾಲೆ ಆರಂಭದ ಬಗ್ಗೆ ತುಂಬಾ ಸಂತೋಷ ಹಂಚಿಕೊಂಡಿದ್ದಾರೆ. ಮೊದಲ ದಿನ ಶಿಕ್ಷಕರು ಎಸೆಸೆಲ್ಸಿ ಮಕ್ಕಳಿಗೆ ತರಗತಿ ನಡೆಸಿದರು. ವಿದ್ಯಾಗಮ ಕಾರ್ಯಕ್ರಮದಲ್ಲಿಯೂ ಮಕ್ಕಳು ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ.
-ಎನ್.ಎಚ್.ನಾಗೂರ, ಉಪನಿರ್ದೇಶಕರು, ಸಾರ್ವನಿಕ ಶಿಕ್ಷಣ ಇಲಾಖೆ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News