ಕಾರ್ಕಳ : ತರಕಾರಿ ಲಾರಿ ಪಲ್ಟಿ ; ಚಾಲಕ ಮೃತ್ಯು
Update: 2021-01-02 11:24 GMT
ಕಾರ್ಕಳ, ಜ. 2: ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಾಳ ಘಾಟಿಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ನಿವಾಸಿ ಅಣ್ಣಪ್ಪ(57) ಎಂದು ಗುರುತಿಸಲಾಗಿದೆ. ಲಾರಿಯ ನಿರ್ವಾಹಕ ರವಿ ಗಾಯ ಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಮಗಳೂರಿನಿಂದ ಬಜಗೋಳಿಗೆ ತರಕಾರಿ ಸಾಗಿಸುತ್ತಿದ್ದ ಲಾರಿಯು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರು. ಲಾರಿಯಲ್ಲಿ ಸಿಲುಕಿದ ಚಾಲಕನ ಮೃತದೇಹ ಹೊರಗಡೆ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಸುಮಾರು ಎರಡು ಗಂಟೆಗಳ ಕಾಲ ಹರ ಸಾಹಸ ಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.