ಅಕ್ರಮ ಸಾಗಾಟಕ್ಕೆ ಯತ್ನ: ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿ ವಶ
ಕುಂದಾಪುರ, ಜ.2: ಕೋಟೇಶ್ವರ ಗ್ರಾಮದ ಹಾಲಾಡಿ ರಸ್ತೆಯ ನಂದಿ ಹೊಟೇಲ್ ಹಿಂಬದಿಯ ಶೆಡ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಲಕ್ಷಾಂತರ ರೂ. ಮೌಲ್ಯ ಅನ್ನಭಾಗ್ಯದ ಅಕ್ಕಿಯನ್ನು ಕುಂದಾಪುರ ಆಹಾರ ನಿರೀಕ್ಷಕರ ನೇತೃತ್ವದ ತಂಡ ಜ.1ರಂದು ಸಂಜೆ ವೇಳೆ ವಶಪಡಿಸಿಕೊಂಡಿದೆ.
ಉದಯ ಕುಮಾರ್ ಶೆಟ್ಟಿ ಎಂಬಾತ ಅಕ್ರಮವಾಗಿ ಸರಕಾರದಿಂದ ಸಿಗುವ ಉಚಿತ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ವಾಹನದಲ್ಲಿ ಸಾಗಾಟ ಮಾಡಲು ತಯಾರಿ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಎಚ್.ಎಸ್.ಸುರೇಶ ಕುಂದಾಪುರ ಪೊಲೀಸರ ಜೊತೆ ದಾಳಿ ನಡೆಸಿದರೆಂದು ತಿಳಿದುಬಂದಿದೆ.
ದಾಳಿ ವೇಳೆ ಉದಯ ಕುಮಾರ್ ಶೆಟ್ಟಿ ಹಾಗೂ ರಾಮ ಪೂಜಾರಿ ಎಂಬ ವರು ಪರಾರಿಯಾಗಿದ್ದಾರೆ. ಲಾರಿ ಚಾಲಕ ಅಝಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶೆಡ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದ 7120 ಕೆಜಿ ತೂಕದ ಅಕ್ಕಿ, ಲಾರಿಯಲ್ಲಿ ತುಂಬಿಸಿಟ್ಟಿದ್ದ 15000 ಕೆಜಿ ಅಕ್ಕಿ, ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟಿದ್ದ 3000 ಕೆಜಿ ಅಕ್ಕಿ ಸೇರಿ ಒಟ್ಟು 3,76,800ರೂ. ಮೌಲ್ಯದ 25,120ಕೆ.ಜಿ. ಪಡಿತರ ಅಕ್ಕಿ, 6 ಲಕ್ಷ ರೂ. ಮೌಲ್ಯದ 2 ವಾಹನಗಳು, 5000ರೂ. ಮೌಲ್ಯದ ಎರಡು ಮೆಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.