ಉಡುಪಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಅನ್ನನಾಳ, ಜಠರ ಕ್ಯಾನ್ಸರ್: ಡಾ. ನವೀನ್

Update: 2021-01-03 16:15 GMT

ಉಡುಪಿ, ಜ.3: ಜಿಲ್ಲೆಯಲ್ಲಿ ಅನ್ನನಾಳದ ಕ್ಯಾನ್ಸರ್ ಹಾಗೂ ಜಠರದ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಿದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯ ಕ್ಯಾನ್ಸರ್ ಹೆಚ್ಚು ಪ್ರಮಾಣದಲ್ಲಿದೆ ಎಂದು ಮಣಿಪಾಲ ಕಸ್ತೂರ್‌ಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾ.ನವೀನ್ ಕುಮಾರ್ ಹೇಳಿದ್ದಾರೆ.

ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಸಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಇತ್ತೀಚಿನ ಕೆಲವು ಸಾಧನೆಗಳ ಕುರಿತು ವಿವರಿಸಿದರು. ಈ ವಿಭಾಗ ಅತ್ಯಂತ ಸಂಕೀರ್ಣವಾದ, ಅಪರೂಪದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುತಿದ್ದು, ದೇಶದ ಕೆಲವೇ ಕೆಲವು ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳಲ್ಲಿ ನಡೆಸಲಾಗುವ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಇಲ್ಲೂ ನಡೆಸಲಾಗುತ್ತಿದೆ ಎಂದರು.

ಕರಾವಳಿ, ಮಲೆನಾಡು ಭಾಗಗಳಿಂದ ಬರುವ ಕ್ಯಾನ್ಸರ್ ರೋಗಿಗಳಲ್ಲಿ ಅನ್ನನಾಳ ಹಾಗೂ ಜಠರ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇದಕ್ಕೆ ಅವರ ಆಹಾರ ಪದ್ಧತಿಯೊಂದಿಗೆ ಅವರು ಅತಿಯಾಗಿ ಸೇವಿಸುವ ಮಸಾಲೆ ಪದಾರ್ಥಗಳೂ ಕಾರಣವೆಂದು ಕಂಡು ಕೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಿಂದೆ 45-50ರ ಹರೆಯದ ಬಳಿಕ ಕಾಣಿಸಿ ಕೊಳ್ಳುತಿದ್ದ ಈ ರೋಗ ಈಗೀಗ 35-40ರ ಹರೆಯದ ಮಹಿಳೆಯಲ್ಲೂ ಸಾಮಾನ್ಯವಾಗಿ ಕಂಡು ಬರುತ್ತಿದೆ. ಬದಲಾದ ಜೀವನ ಶೈಲಿ ಇದಕ್ಕೆ ಕಾರಣವೆಂದು ಕಂಡುಕೊಳ್ಳಲಾಗಿದೆ ಎಂದು ಡಾ.ನವೀನ್ ‌ಕುಮಾರ್ ತಿಳಿಸಿದರು.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕ್ಯಾನ್ಸರ್ ಕುರಿತಂತೆ ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆದಿದೆಯೇ ಎಂದವರನ್ನು ಪ್ರಶ್ನಿಸಿದಾಗ, ಈವರೆಗೆ ನಡೆದಿಲ್ಲ. ಆದರೆ ಇತ್ತೀಚೆಗೆ ನಾವು ವಿಶೇಷ ಅಧ್ಯಯನಕ್ಕೆ ಮುಂದಾಗಿದ್ದೇವೆ ಎಂದರು.

ಕ್ಯಾನ್ಸರ್ ರೋಗಿಗಳ ಮೇಲೆ ಕೋವಿಡ್ ಪರಿಣಾಮದ ಕುರಿತು ಪ್ರಶ್ನಿಸಿದಾಗ, ಕೋವಿಡ್ ಸೋಂಕು ಪತ್ತೆಯಾದ ರೋಗಿಗಳಲ್ಲಿ ಶ್ವಾಸಕೋಶದ ಮೇಲೆ ಮೊದಲು ಪರಿಣಾಮ ಬೀರುವುದರಿಂದ, ಮೊದಲು ಶಾಸ್ವಕೋಶ ಸೋಂಕನ್ನು ನಿಯಂತ್ರಿಸಿ ಬಳಿಕ ಕ್ಯಾನ್ಸರ್‌ಗೆ ಚಿಕಿತ್ಸೆ ನಡೆಸಲಾಗುತ್ತಿತ್ತು. ಕೋವಿಡ್-19 ತೀವ್ರವಾಗಿದ್ದ ಅವಧಿಯಲ್ಲಿ ಕ್ಯಾನ್ಸರ್ ವಿಭಾಗದಿಂದ 280ಕ್ಕೂ ಅಧಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾ ಗಿದೆ ಎಂದು ಡಾ.ನವೀನ್ ತಿಳಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆ: ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಅತ್ಯಂತ ಕ್ಲಿಷ್ಟಕರ ಹಾಗೂ ಸಂಕೀರ್ಣವಾದ ಹಲವು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇವುಗಳಲ್ಲಿ ಶ್ವಾಸನಾಳದ (ವಿಂಡ್‌ಪೈಪ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯೂ ಒಂದು. ನಾವು ಈಚಿನ ದಿನಗಳಲ್ಲಿ 70ವರ್ಷ ಪ್ರಾಯದ ಹಿರಿಯರು ಸೇರಿದಂತೆ ಒಟ್ಟು ನಾಲ್ವರು ರೋಗಿಗಳಿಗೆ ಟ್ರಾಕಿಯೊಬ್ರಾಂಕಿಯಲ್ (ಶ್ವಾಸನಾಳ) ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಪ್ರಸ್ತುತ ರೋಗಿ 9ತಿಂಗಳಿನಿಂದ ಆರೋಗ್ಯಪೂರ್ಣ ರಾಗಿದ್ದಾರೆ ಎಂದು ಡಾ.ನವೀನ್ ವಿವರಿಸಿದರು.

ಅಲ್ಲದೇ ಎದೆಯೊಳಗೆ ಪುಟ್ಭಾಲ್ ಗಾತ್ರದ ಕ್ಯಾನ್ಸರ್ ಗಡ್ಡೆಗೆ 2 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಅದರಲ್ಲೂ 15 ವರ್ಷದ ಬಾಲಕನಲ್ಲಿ 3ಕೆ.ಜಿ. ಯಷ್ಟು ತೂಕದ ಗಡ್ಡೆ ಇದ್ದು, ಅದನ್ನು 10ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣಗಡ್ಡೆಯನ್ನು ತೆಗೆದುಹಾಕಲಾಯಿತು. ಈತ ಐದು ತಿಂಗಳಿನಿಂದ ಆರೋಗ್ಯವಂತನಾಗಿದ್ದಾನೆ.

ಮತ್ತೊಬ್ಬ 15 ವರ್ಷ ಬಾಲಕಿಗೆ ಕುತ್ತಿಗೆಯನ್ನು ಒಳಗೊಂಡ ದೊಡ್ಡ ರಕ್ತಸ್ರಾವದ ಗಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾ ಯಿತು. 14 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆಯ ಬಳಿಕ 5 ಕೆ.ಜಿ.ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದು, ಫ್ಲಾಸ್ಟಿಕ್ ಸರ್ಜರಿ ಮೂಲಕ ಕುತ್ತಿಗೆಯನ್ನು ಪುನರ್ನಿರ್ಮಿಸ ಲಾಯಿತು ಎಂದವರು ತಿಳಿಸಿದರು.

ಅಲ್ಲದೇ ನಮ್ಮ ವಿಭಾಗದಲ್ಲಿ ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳ, ಹೊಟ್ಟೆ, ದೊಡ್ಡಕರುಳು ಮತ್ತು ಕರುಳಿನ ಕೊನೆ ಭಾಗ, ಗರ್ಭಾಶಯ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. 25ರ ಹರೆಯದ ಅನ್ನನಾಳ ಕ್ಯಾನ್ಸರ್ ರೋಗಿಗೆ ಕೀಹೋಲ್ ಎಂಬ ಸಂಕೀರ್ಣ ವಿಧಾನದ ಶಸ್ತ್ರಚಿಕಿತ್ಸೆ ನಡೆಸಿದ್ದು, ಅನ್ನನಾಳವನ್ನು ಕರುಳನ್ನು ಬಳಸಿ ಪುನರ್ನಿರ್ಮಿಸ ಲಾಯಿತು.ಇವರು ಈಗ ಆರಾಮವಾಗಿ ದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಸಮಗ್ರ ಆರೈಕೆ ಕೇಂದ್ರದ ಸಂಯೋಜಕ ಡಾ.ನವೀನ್ ಎಸ್. ಸಲಿನ್ಸ್, ಗುಣಮಟ್ಟದ ಶಸ್ತ್ರಚಿಕಿತ್ಸ ಕರು, ಅರಿವಳಿಕೆ ತಜ್ಞರು, ದಾದಿಯರು ಮತ್ತು ಆಸ್ಪತ್ರೆಯ ಸಮರ್ಥ ಆಡಳಿತ ತಂಡದಿಂದ ಈ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗುತ್ತಿದೆ ಎಂದರಲ್ಲದೇ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ (ಎಂಸಿಸಿಸಿಸಿ ) ದೊರೆಯುವ ಸೌಲಭ್ಯಗಳು, ಸೇವೆಯ ಕುರಿತು ವಿವರಿಸಿದರು.

ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ನುರಿತ ತಂಡದಲ್ಲಿ ಡಾ.ನವಾಜ್ ಉಸ್ಮಾನ್, ಡಾ.ಕೇಶವ ರಾಜನ್ ಮತ್ತು ಡಾ.ಪ್ರೀತಿ ಶೆಟ್ಟಿ ಇದ್ದು, ಇವರೆ ಲ್ಲರೂ ಮುಂಬೈನ ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಪಡೆದಿದ್ದಾರೆ.

ಕೆಎಂಸಿ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ, ಡಾ. ಕಾರ್ತಿಕ್ ಉಡುಪ, ಡಾ ಸುಮಿತ್ ಎಸ್ ಮಾಲಾಪುರೆ, ಡಾ ವಾಸುದೇವ ಭಟ್, ಡಾ.ನವಾಝ್ ಉಸ್ಮಾನ್, ಡಾ. ಕೇಶವ ರಾಜನ್, ಸುಧಾಕರ್ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News