ಪಾಕ್ ಪರ ಘೋಷಣೆ ಪ್ರಕರಣ : ನೈಜ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಸಿಎಫ್‌ಐ ಪ್ರತಿಭಟನೆ

Update: 2021-01-04 13:47 GMT

ಮಂಗಳೂರು, ಜ.4: ಉಜಿರೆಯಲ್ಲಿ ಗ್ರಾಪಂ ಚುನಾವಣೆಯ ವಿಜಯೋತ್ಸವ ಸಂದರ್ಭ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದ ನೈಜ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ನಗರದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಘಟನೆಗೆ ಸಂಬಂಧಿಸಿ ಪೊಲೀಸರು ಸತ್ಯಾಸತ್ಯತೆ ಅರಿತುಕೊಳ್ಳದೆ ಅಮಾಯಕ ಮೂವರು ಯುವಕರನ್ನು ಬಂಧಿಸಿರುವುದು ಖಂಡನೀಯ. ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ನೈಜ ವೀಡಿಯೋ ಇದೀಗ ಬಯಲಾಗಿದೆ. ಆರೋಪಿ ಯಾರು ಎಂಬುದು ಕೂಡ ಪೊಲೀಸರಿಗೆ ತಿಳಿದಿದೆ. ಆದರೆ ನಿಜವಾದ ಆರೋಪಿಗಳನ್ನು ಬಂಧಿಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿದೆ. ಪೊಲೀಸರು ಯಾವ ಕಾರಣಕ್ಕೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ನೈಜ ಆರೋಪಿಯನ್ನು ಬಂಧಿಸಿ ಅವಾಯರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಚೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಬೇಕಾದೀತು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಅಲ್ಲದೆ ಬಿಜೆಪಿಯ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಿಎಫ್‌ಐ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಮಾತನಾಡಿ, ಉಜಿರೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಬಿಜೆಪಿ ಕಾರ್ಯಕರ್ತ ಪವನ್ ಧರ್ಮಸ್ಥಳ ಎಂಬಾತನನ್ನು ಶೀಘ್ರ ಬಂಧಿಸಬೇಕು ಎಂದರು.

ಸಿಎಫ್‌ಐ ಮಂಗಳೂರು ವಲಯಾಧ್ಯಕ್ಷೆ ಮುರ್ಷಿದಾ ಮಲಾರ್, ಜಿಲ್ಲಾ ಕಾರ್ಯದರ್ಶಿ ಮುನೀರ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯರಾದ ಶರ್ಫುದ್ದೀನ್ ಬಜ್ಪೆ, ಇಹ್ತಿಶಾಮ್, ಮುಫಿದಾ, ಸರಫ್ ಮತ್ತಿತರರು ಉಪಸ್ತಿತರಿಧ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News