ಕೇಡರ್ ಬೇಝ್ ಪಕ್ಷವಾಗಿ ಕಾಂಗ್ರೆಸ್ ನ್ನು ಸಂಘಟಿಸುವುದು ಮುಂದಿನ ಗುರಿ: ಡಿ.ಕೆ.ಶಿವಕುಮಾರ್

Update: 2021-01-06 10:05 GMT

ಬಂಟ್ವಾಳ, ಡಿ.6: ಮಾಸ್ ಬೇಝ್ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಝ್ ಪಕ್ಷವಾಗಿ ಸಂಘಟಿಸುವುದು ನಮ್ಮ ಮುಂದಿನ ಗುರಿಯಾಗಿದ್ದು ಈ ಹಿನ್ನೆಲೆಯಲ್ಲಿ 2021ನೇ ಇಸವಿ ಕಾಂಗ್ರೆಸ್ ಪಾಲಿಗೆ ಹೋರಾಟ ಮತ್ತು ಸಂಘಟನಾ ವರ್ಷವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ವತಿಯಿಂದ ತಾಲೂಕಿನ ಬಿ.ಸಿ.ರೋಡ್ ಸಾಗರ ಸಭಾ ಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮೈಸೂರು ಪ್ರಾಂತ್ಯದ ಪ್ರಮುಖ ಪ್ರತಿನಿಧಿಗಳ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಕ್ಷಕ್ಕೆ ಹೊಸ ರೂಪ ನೀಡಲು ಹಳೆಯ ನಿಯಮಗಳನ್ನು ಮಾರ್ಪಾಡು ಮಾಡಿ ಹಲವು ಪ್ರಮುಖ ಹೊಸ ನಿರ್ಧಾರಗಳನ್ನು ಮಾಡಲಾಗಿದೆ. ಪ್ರಜಾ ಪ್ರತಿನಿಧಿ ಹೆಸರಿನಲ್ಲಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಲು ಬೂತ್ ಮಟ್ಟದಿಂದಲ್ಲೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ಬಲಗೊಳಿಸಲಾಗುವುದು ಎಂದು ಅವರು ಹೇಳಿದರು‌.

ಪಕ್ಷದ ಗುರಿ ಮತ್ತು ಸಿದ್ಧಾಂತವನ್ನು ದೂರ ಇಟ್ಟಾಗ ನಮಗೆ ಸೋಲಾಗುತ್ತದೆ ಎಂದು ಜವಾಹರಲಾಲ್ ನೆಹರೂ ಅಂದೇ ಹೇಳಿದ್ದರು. ಯಾವುದೇ ಒತ್ತಡ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪಕ್ಷದ ಗುರಿ ಮತ್ತು ಸಿದ್ಧಾಂತವನ್ನು ತಮ್ಮ ಅಡಿಪಾಯವನ್ನಾಗಿ ಮಾಡಬೇಕು ಎಂದರು.

ಪಕ್ಷದ ಪ್ರತಿಯೊಬ್ಬ ನಾಯಕನ ನಾಯಕತ್ವದ ಗುಣವನ್ನು ಪರೀಕ್ಷೆ ಮಾಡುವ ಅನಿವಾರ್ಯ ಇದೆ. ಪಕ್ಷದಲ್ಲಿ ಒಂದು ವ್ಯಕ್ತಿ ಒಂದು ಹುದ್ದೆ ನಿಯಮವನ್ನು ಕಟ್ಟುನಿಟ್ಟು ಮಾಡುವ ಮೂಲಕ ಒಂದು ಹುದ್ದೆಯಲ್ಲಿ ಇದ್ದವನಿಗೆ ಬೇರೆ ಹುದ್ದೆ ನೀಡದೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಪಕ್ಷದಲ್ಲಿ ಯಾರೂ ನಾಯಕರಿಲ್ಲ‌‌‌. ಎಲ್ಲರೂ ಕಾರ್ಯಕರ್ತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದ ಪ್ರತೀ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಬೇರೆ ಬೇರೆ ಸಮಸ್ಯೆಗಳು ಇರುತ್ತವೆ. ಪ್ರತೀ ಸಮಸ್ಯೆಗಳ ವಿರುದ್ಧವೂ ಹೋರಾಟ ನಡೆಸುವ ಮೂಲಕ ಪಕ್ಷದ ಜನರ ವಿಶ್ವಾಸ ಗೆಲ್ಲಬೇಕು. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗದವರ ಆಸ್ತಿ. ಹಾಗಾಗಿ ಎಲ್ಲಾ ವರ್ಗದ ಜನರನ್ನು ಬೂತ್ ಮಟ್ಟದಲ್ಲೇ ಸಂಘಟಿಸುವ ಮೂಲಕ ಪಕ್ಷವನ್ನು ಸಂಘಟಿಸಬೇಕು ಎಂದು ಹೇಳಿದರು.

''ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಯಕ್ತಿಕ ಅಭ್ಯಾಸಗಳ ಕುರಿತು ಮಾತನಾಡಿದ್ದು ಅದು ಅವರ ಸ್ವಂತ ಅಭಿಪ್ರಾಯವಾಗಿದೆ. ಅದರಿಂದ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ನಾವೆಲ್ಲ ಗೋಮಾತೆಗೆ ಗೌರವ ಕೊಡುತ್ತೇವೆ. ಇದು ನಮ್ಮ ಸಂಸ್ಕೃತಿ‌. ಹಸು ಎಲ್ಲ ಸಮುದಾಯಕ್ಕೂ ಸೇರಿದ್ದು. ಎಲ್ಲಾ ವರ್ಗದ ಮಂದಿಯೂ ಹೈನುಗಾರಿಕೆ ಮಾಡುತ್ತಾರೆ. ಗೋವನ್ನು ಪೂಜಿಸುವ ಪದ್ಧತಿ ಮೊದಲಿನಿಂದಲೂ ಇದೆ. ಆದರೆ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕೋಸ್ಕರ ಇದನ್ನು ಮಾಡುತ್ತಿದೆ. ಬಿಜೆಪಿಯವರಿಗೆ ಸಾಧ್ಯವಿದ್ದರೆ ಮೊದಲು ಗೋಮಾಂಸ ರಫ್ತು ನಿಷೇಧ ಮಾಡಲಿ''.

- ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News