ಜ.9-10: ಯೆನೆಪೊಯ ಆಸ್ಪತ್ರೆಯಲ್ಲಿ ಉಚಿತ ಪ್ರಕೃತಿ ಚಿಕಿತ್ಸೆ, ಆರೋಗ್ಯ ಜಾಗೃತಿ ಶಿಬಿರ
ಮಂಗಳೂರು, ಜ.7:ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇದರ ಯೆನೆಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯ ಆಶ್ರಯದಲ್ಲಿ ಜ.9 ಮತ್ತು 10ರಂದು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ನವೀನ್ ಜಿ.ಎಚ್. ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜ.9ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಬೀಚ್ ಹೀಲಿಂಗ್ ಹೋಮ್ ಉಡುಪಿ ಇದರ ನಿರ್ದೇಶಕ ಡಾ. ಮಹಮ್ಮದ್ ರಫೀಕ್ ನೆರವೇರಿಸಲಿದ್ದಾರೆ.
ಈ ಶಿಬಿರದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ತಪಾಸಣೆಯೊಂದಿಗೆ ಪ್ರಾಕೃತಿಕ ಆಹಾರ ಮತ್ತು ಪಥ್ಯದ ಮಾಹಿತಿ, ಸೂಜಿ ಚಿಕಿತ್ಸೆ, ಫಿಸಿಯೋಥೆರಪಿ, ಯೋಗ ಮತ್ತು ಸೈಸರ್ಗಿಕ ಆಹಾರದ ಪ್ರದರ್ಶನ, ಉಚಿತ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಲಾಗುವುದು. ನುರಿತ ತಜ್ಞ ವೈದ್ಯರು ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಶಿಬಿರದ ಸದುಪಯೋಗ ಪಡೆಯಲು ಮೊ.ಸಂ: 9449468558, 8494935215, 9844474460, 9448790070 ಅಥವಾ 7259654889ನ್ನು ಸಂಪರ್ಕಿಸಿ ನೋಂದಣಿ ಮಾಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವೈದ್ಯಾಧಿಕಾರಿ ಸಂಗೀತ ಲಕ್ಷ್ಮಿ, ಮುಹಮ್ಮದ್ ಗುತ್ತಿಗಾರ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.