ಸೋಮೇಶ್ವರ ಉಚ್ಚಿಲ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಶೇಖರಣೆ: ಸಾರ್ವಜನಿಕರಿಂದ ಪ್ರತಿಭಟನೆ

Update: 2021-01-07 15:18 GMT

ಮಂಗಳೂರು, ಜ.7: ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಸಮೀಪದ ಉಚ್ಚಿಲದ ಅಂಡರ್‌ಪಾಸ್‌ನ ಅಸಮರ್ಪಕ ಕಾಮಗಾರಿಯಿಂದಾಗಿ ಮಳೆ ನೀರು ಶೇಖರಣೆಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸದಿರುವುದನ್ನು ಖಂಡಿಸಿ ಸಾರ್ವಜನಿಕರು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿ ಬಾರಿ ಮಳೆಯಾದಾಗ ಉಚ್ಚಿಲದ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಹಲವು ವರ್ಷದಿಂದ ಈ ಸಮಸ್ಯೆಯಿದ್ದರೂ ಕೂಡ ನವಯುಗ ಸಂಸ್ಥೆಯವರು ಪರಿಹಾರ ಕಂಡುಕೊಳ್ಳಲಿಲ್ಲ. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಮಾತನಾಡಿದ ರಹ್ಮಾನಿಯ ಶಾಲೆಯ ಅಧ್ಯಕ್ಷ ಅಬ್ದುಸ್ಸಲಾಮ್, ಉಚ್ಚಿಲದ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿರುವ ಬಗ್ಗೆ ಹಲವಾರು ಬಾರಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರೂ ಕೂಡ ಈವರೆಗೆ ಸಂಬಂಧ ಪಟ್ಟ ಅಧಿಕಾರಿ ಗಳು ಭರವಸೆ ಮಾತ್ರ ನೀಡುತ್ತಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಕೇವಲ ಒಂದು ಕಡೆ ಮಾತ್ರ ಸರ್ವಿಸ್ ರಸ್ತೆ ಮಾಡಿಲ್ಲ. ಇದರಿಂದ ಹಲವು ಶಾಲೆ ಹಾಗೂ ಮದ್ರಸದ ಮಕ್ಕಳು ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಇದೆ. ಇದು ಅಪಾಯಕಾರಿಯಾದ್ದರಿಂದ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ತಿಳಿಸಿದ್ದಾರೆ.

ಮಾಜಿ ಪುರಸಭಾ ಸದಸ್ಯ ಸಲಾಮ್ ಜಿ.ಎ. ಮಾತನಾಡಿ ಅಂಡರ್‌ಪಾಸ್‌ನ ಅಸಮರ್ಪಕ ಕಾಮಗಾರಿಗೆ ನವಯುಗ ಕಂಪನಿಯೇ ಜವಾಬ್ದಾರಿ ಎಂದು ಆಪಾದಿಸಿದರು.

ಮಳೆ ನೀರು ನಿಂತಾಗ ಶಾಲೆ ಹಾಗೂ ಮದ್ರಸದ ಮಕ್ಕಳು ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಉಂಟಾದ್ದರಿಂದ ಹೆದ್ದಾರಿಯ ಮೂಲಕ ರಸ್ತೆ ದಾಟುತ್ತಿದ್ದ ಮೂವರು ವಿದ್ಯಾರ್ಥಿಗಳು ಈಗಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಕೂಡ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಕೆಲಸ ಪೂರ್ಣಗೊಳಿಸದೆ ನವಯುಗದವರು ಟೋಲ್ ತೆಗೆಯುತ್ತಿರುವುದು ಮತ್ತೊಂದು ದುರಂತ ಎಂದು ಸ್ಥಳೀಯ ರಾದ ಅಬ್ದುಲ್ ನಾಸಿರ್ ತಿಳಿಸಿದ್ದಾರೆ.

ಸೊಮೇಶ್ವರ ಉಚ್ಚಿಲದ ಅಂಡರ್ ಪಾಸ್ ದುರವಸ್ಥೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಕ್ರಮಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಪ್ರತೀ ಮಳೆಗೂ ಈ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಸಾರ್ವಜನಿಕರು ಓಡಾಟಕ್ಕೆ ಹರ ಸಾಹಸದ ಪಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಂಸದರ ಅಧೀನದಲ್ಲಿ ಬರುವುದರಿಂದ ತಕ್ಷಣ ಸಂಸದ ನಳಿನ್ ಕುಮಾರ್ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News