ಕೇರಳದಿಂದ ಕೋಳಿ ಉತ್ಪನ್ನ ಸಾಗಾಟಕ್ಕೆ ನಿರ್ಬಂಧ : ದ.ಕ. ಜಿಲ್ಲಾಧಿಕಾರಿ ರಾಜೇಂದ್ರ

Update: 2021-01-07 18:07 GMT

ಮಂಗಳೂರು, ಜ.7: ಕೇರಳದಿಂದ ದ.ಕ. ಜಿಲ್ಲೆಗೆ ಬರುವ ಎಲ್ಲ ರೀತಿಯ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಸಾಗಾಟವನ್ನು ನಿರ್ಬಂಧಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋಳಿಜ್ವರ ರೋಗದ ಹರಡುವಿಕೆ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳ ರಾಜ್ಯಕ್ಕೆ ಜಿಲ್ಲೆಯಿಂದ ರವಾನಿಸುವ ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ವಾಹನಗಳನ್ನು ರಾಜ್ಯ ಮಟ್ಟದ ಗಡಿಭಾಗದಲ್ಲಿ ನಂಜುನಾಶಕ ಔಷಧ ಸಿಂಪಡಿಸಬೇಕು ಎಂದರು.

ನೆರೆ ರಾಜ್ಯ ಕೇರಳದ ಕೊಟ್ಟಾಯಂ ಮತ್ತು ಅಲಾಪುಝ ಜಿಲ್ಲೆಯಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ ಹಕ್ಕಿಜ್ವರ ಸೋಂಕು ದೃಢಪಟ್ಟಿದ್ದು, ಜಿಲ್ಲೆ ಯಲ್ಲೂ ಈ ರೋಗ ಹರಡುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ ಪಕ್ಷಿಧಾಮ, ನೀರು ಸಂಗ್ರಹ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋಳಿ ಫಾರಂಗಳಲ್ಲಿ ಸ್ವಚ್ಛತೆಗೆ ಮಾಲಕರು ಅಗತ್ಯ ಕ್ರಮ ವಹಿಸುವುದರ ಜೊತೆಗೆ ಅನಗತ್ಯವಾಗಿ ಜನರ ಓಡಾಟವನ್ನು ನಿರ್ಬಂಧಿಸಬೇಕು ಎಂದರು.

ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಹಾಗೂ ಹಕ್ಕಿ ಜ್ವರ ಲಕ್ಷಣ ಕಂಡುಬಂದ್ದಲ್ಲಿ ತಕ್ಷಣವೇ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು. ರೋಗದ ಪರಿಶೀಲನೆ ಮತ್ತು ರೋಗದ ಕಣ್ಗಾವಲನ್ನು ನಿಗಾ ವಹಿಸಲು ಜಿಲ್ಲೆಯಲ್ಲಿರುವ ಕೋಳಿ ಫಾರಂಗೆ ಪಶುಪಾಲನಾ ಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಬೇಕೆಂದು ಸೂಚನೆ ನೀಡಿದರು.

ಕೋಳಿಶೀತ ಜ್ವರದ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

ಸಭೆಯಲ್ಲಿ ಪಶು ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಹಾಗೂ ಪ್ರಾದೇಶಿಕ ಸಂಶೋಧನಾ ಅಧಿಕಾರಿ ವಸಂತ ಶೆಟ್ಟಿ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News