ಯಕ್ಷಗಾನ ಸಾಹಿತ್ಯಕ್ಕೂ ಆದ್ಯತೆ ಅಗತ್ಯ: ನೀಲಾವರ ಸುರೇಂದ್ರ ಅಡಿಗ
ಉಡುಪಿ, ಜ.9: ಯಕ್ಷಗಾನದಲ್ಲಿಯೂ ಸಾಹಿತ್ಯ ಅತ್ಯಂತ ಶ್ರೀಮಂತ ವಾಗಿದೆ. ಆದುದರಿಂದ ಸಾಹಿತ್ಯದ ಜೊತೆಗೆ ಯಕ್ಷಗಾನ ಸಾಹಿತ್ಯಕ್ಕೂ ಆದ್ಯತೆ ನೀಡುವ ಕೆಲಸ ಆಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಉಡುಪಿ ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ಲೇಕಕಿಯರ ಸಂಘದ ಆಶ್ರಯದಲ್ಲಿ ಶನಿವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸಲಾದ ಯಕ್ಷಪ್ರೇಮಿ ದಿ.ನಾರಾಯಣ ಸ್ಮರಣಾರ್ಥ ದತ್ತಿ ಸನ್ಮಾನ ಕಾರ್ಯಕ್ರಮ ಮತ್ತು ಸಾಧಕ ವಿಧ್ಯಾರ್ಥಿಗಳಿಗೆ ಗೌರವಧನ ವಿತರಣಾ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಕಸಾಪ ಉಡುಪಿ ಜಿಲ್ಲಾ ಘಟಕದಲ್ಲಿ ಆರು ಇದ್ದ ದತ್ತಿ ನಿಧಿಯ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಂದು ಲಕ್ಷ ರೂ. ಮೊತ್ತದ ಎರಡು ದತ್ತಿ ನಿಧಿಗಳಿವೆ. ಈ ಮೂಲಕ ದತ್ತಿ ಉಪನ್ಯಾಸ, ದತ್ತಿ ಸನ್ಮಾನಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ವಸಂತಿ ಶೆಟ್ಟಿ ಬ್ರಹ್ಮಾವರ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಪಾತ್ರಧಾರಿ ಹಾಗೂ ಅರ್ಥಧಾರಿ ಪದ್ಮನಾಭ ಗಾಣಿಗ ಮೂಡುಕುದ್ರು ಸನ್ಮಾನಿಸಲಾಯಿತು.
ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಡಾ.ನಿಕೇತನ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ಗಣೇಶ್ ಅಭಿನಂದನಾ ಪತ್ರ ವಾಚಿಸಿದರು. ಮುರಳೀಧರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಲೆ ಪ್ರಸಂಗ ಜರಗಿತು.