ಮಂಗಳೂರಿನಲ್ಲಿ ಸ್ವಚ್ಛ ಭಾರತ ನಿಷ್ಕ್ರಿಯ: ಜೆ.ಆರ್. ಲೋಬೋ

Update: 2021-01-09 15:00 GMT

ಮಂಗಳೂರು, ಜ.8: ಸ್ವಚ್ಛತೆ ಕುರಿತಂತೆ ಪ್ರಮುಖ ನಗರವಾಗಿ ಗುರುತಿಸಿಕೊಂಡಿದ್ದ ಮಂಗಳೂರು ನಗರ ಇದೀಗ ಘನತ್ಯಾಜ್ಯ ನಿರ್ವಹಣೆ ಯಲ್ಲಿನ ಲೋಪದೋಷಗಳಿಂದಾಗಿ ಅಧ:ಪತನಕ್ಕಿಳಿದಿದೆ. ಮಂಗಳೂರಿನಲ್ಲಿ ಸ್ವಚ್ಛ ಭಾರತ ಯೋಜನೆ ನಿಷ್ಕ್ರಿಯವಾಗಿದೆ ಎಂದ ಮಾಜಿ ಶಾಸಕ ಜೆ.ಆರ್. ಲೋಬೋ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ವ್ಯವಸ್ಥೆ ಇಲ್ಲದೆ ಕಸ ವಿಂಗಡನೆಯಡಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದರಿಂದ ಹಸಿ ಕಸ ಸಮರ್ಪಕವಾಗಿ ವಿಲೇ ಆಗದೆ ನಗರದ ಬೀದಿ ಬದಿಗಳಲ್ಲಿ ತ್ಯಾಜ್ಯ ಸುರಿಯುವ ಪ್ರಮೇಯ ಎದುರಾಗಿದೆ ಎಂದು ಅವರು ದೂರಿದರು.

2014ರಲ್ಲಿ ಈಗಿನ ಪ್ರಧಾನಿ ಸ್ವಚ್ಚ ಭಾರತ್ ಯೋಜನೆ ಆರಂಭಿಸಿದರು. 2012ರಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣ ನೈರ್ಮಲೀಕರಣ ಅಭಿಯಾನ ಹಮ್ಮಿಕೊಂಡಿತ್ತು. ಇದು ಮುಂದೆ ನಿರ್ಮಲ ಭಾರತ ಅಭಿಯಾನವಾಗಿ ಮುಂದುವರಿಯಿತು. ಮುಂದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸ್ವಚ್ಛ ಭಾರತ ಎಂದ ಮರು ನಾಮಕರಣವನ್ನು ಒಳ್ಳೆಯ ಉದ್ದೇಶದಿಂದಲೇ ಮಾಡಿದೆ. ಇದಕ್ಕಾಗಿ 620 ಬಿಲಿಯನ್ ರೂ.ಗಳನ್ನು ವ್ಯಯಿಸಲಾಯಿತು. ಮೊದಲ ಹಂತದ ಯೋಜನೆ 2019ಕ್ಕೆ ಮುಗಿದು ಮತ್ತೆ 2020-2025ರವರೆಗೆ ಮುಂದುವರಿಸಲಾಗಿದೆ. ಆದರೆ ಈ ಹಿಂದೆ ಇದ್ದ ಮಂಗಳೂರು ನಗರಕ್ಕೂ ಈಗಿನ ಮಂಗಳೂರು ನಗರದ ಸ್ವಚ್ಛತೆಯನ್ನು ನೋಡಿದಾಗ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದರೂ ಸ್ವಚ್ಚತೆಯಲ್ಲಿ ಮಂಗಳೂರು ನಗರಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಒಣ ಹಾಗೂ ಹಸಿ ಕಸ ವಿಂಗಡನೆಯ ಬಳಿಕ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಒಣ ಕಸ ಸಂಗ್ರಹಿಸುವ ದಿನ ಹಸಿ ಕಸವನ್ನು ಸಂಗ್ರಹಿಸಿದ ಕಾರಣ ಎರಡರಿಂದ ಮೂರು ದಿನಗಳ ಕಾಲ ಹಸಿ ಕಸ ಕೊಳೆತು ನಾರುವ ಪರಿಸ್ಥಿತಿ, ತೊಟ್ಟಿಗಳಲ್ಲಿ ಕಸವನ್ನು ಹಾಕಲಾಗುತ್ತಿರುವುದರಿಂದ ನಾಯಿಗಳು ಎಳೆದಾಡಿ ರಸ್ತೆಯಲ್ಲಿ ಚೆಲ್ಲುವ ರಾಗೂ ಸ್ವಚ್ಛತೆ ನಿರ್ವಹಿಸುವವರು ಪದೇ ಪದೇ ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ. ಹಿಂದೆಯೂ ತ್ಯಾಜ್ಯ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಹಿಂದಿನ ನಗರದ ಪಾಲಿಕೆ ಆಡಳಿತವೂ ಎದುರಿಸಿದೆ. ಆದರೆ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ ಎಂದವರು ಹೇಳಿದರು. ಕಸ ನಿರ್ವಹಣೆಯ ಗುತ್ತಿಗೆದಾರರಿಗೆ ಹಣದ ಕೊರತೆ ಎಂದು ಹೇಳಲಾಗುತ್ತಿದೆ. ಆದರೆ ನಗರದಲ್ಲಿ ಕಸ ಸಂಗ್ರಹಕ್ಕಾಗಿಯೇ ಶುಲ್ಕ ಪಡೆಯಲಾಗುತ್ತದೆ. ಪ್ರಸಕ್ತ ಶುಲ್ಕದ ಆಧಾರದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಕನಿಷ್ಠ ವಾರ್ಷಿಕ 60 ಕೋಟಿ ರೂ. ಶುಲ್ಕ ಸಂಗ್ರಹವಾಗಿಲ್ಲವೆಂದಾದರೆ ಇದು ಆಡಳಿತ ವೈಫಲ್ಯ. ಹಿಂದಿನ ಅವಧಿಯಲ್ಲಿ ಆಗಿರುವ ಲೋಪಗಳನ್ನು ಟೀಕಿಸಿ ಒಳ್ಳೆಯ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತವು ಪೊಳ್ಳು ಭರವಸೆ ಮಾತ್ರವೇ ಸೀಮಿತವಾಗಿದೆ ಎಂದು ಅವರು ಆರೋಪಿಸಿದರು.

ಅಧಿಕಾರಿಗಳೆಂಬ ಕುದುರೆಯನ್ನು ನಿಯಂತ್ರಿಸಲು ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸಾಧ್ಯವಾಗದೆ ಅವುಗಳು ದಿಕ್ಕುಪಾಲಾಗಿ ಓಡುತ್ತಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ದೂರಿದರು. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಹಿಂದಿನ ಆಡಳಿತದಲ್ಲೂ ಲೋಪದೋಷಗಳಿದ್ದವು. ಆದರೆ ಇಂತಹ ಪರಿಸ್ಥಿತಿ ಹಿಂದೆ ಎಂದೂ ಬಂದಿರಲಿಲ್ಲ. 2016ರಲ್ಲಿ ತ್ಯಾಜ್ಯ ನಿರ್ವಹಣೆಯ ಈ ಪೈಲಟ್ ಯೋಜನೆ ಜಾರಿಗೆ ಬಂದಿದ್ದರೂ ಈಗಿನ ಪರಿಸ್ಥಿತಿ ಇಷ್ಟು ನಿಕೃಷ್ಟ ಸ್ಥಿತಿಗೆ ತಲುಪಲು ಹಿಂದಿನ ಆಡಳಿತ ಅವಕಾಶ ನೀಡಿಲ್ಲ ಎಂದು ಮನಪಾ ವಿಪಕ್ಷ ನಾಯಸಕ ಅಬ್ದುಲ್ ರವೂಫ್ ಹೇಳಿದರು. ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ವಿನಯ ರಾಜ್, ಪ್ರಕಾಶ್ ಸಾಲಿಯಾನ್, ಸಲೀಂ, ಸಂಶುದ್ದೀನ್, ಕೇಶವ ಮರೋಳಿ, ವಿಶ್ವಾಸ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News