'ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದವರು ಸಪ್ದರ್ ಹಾಶ್ಮಿ'

Update: 2021-01-09 15:55 GMT

ಉಡುಪಿ, ಜ.9: ಜನಸಾಮಾನ್ಯರ ನೋವಿಗೆ, ಶೋಷಿತರ ಧ್ವನಿಗೆ ಬೀದಿ ನಾಟಕಗಳ ಮೂಲಕ ಪ್ರತಿಧ್ವನಿಯಾಗಿ ಮೊಳಗಿದವರು ಕೇವಲ 34 ವರ್ಷ ಪ್ರಾಯದಲ್ಲಿ ಗೂಂಡಾಗಳಿಂದ ಬೀದಿಯಲ್ಲಿ ಹಲ್ಲೆಗೊಳಗಾಗಿ ನಿಧನರಾದ ನಾಟಕಕಾರ, ನಿರ್ದೇಶಕ, ನಟ, ರಂಗಕರ್ಮಿ ಸಫ್ದರ್ ಹಾಶ್ಮಿ ಎಂದು ಅನುವಾದಕಿ, ನಾಟಕಕಾರ್ತಿ ಹಾಗೂ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಸಂಘಟನೆಯ ವತಿಯಿಂದ ಭಾರತದ ಬೀದಿ ನಾಟಕಗಳ ಹರಿಕಾರರೆಂದು ಪರಿಗಣಿಸಲ್ಪಡುವ ಸಫ್ದರ್ ಹಾಶ್ಮಿ ನೆನಪಿನ ‘ಹಲ್ಲಾ ಬೋಲ್’ ಕಾರ್ಯಕ್ರಮವನ್ನು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಡವರ ನೋವಿಗೆ, ಶೋಷಿತರ ಸಂಕಷ್ಟಗಳಿಗೆ ಸಕಾಲದಲ್ಲಿ, ಸಕಾರಾತ್ಮವಾಗಿ ಸ್ಪಂಧಿಸುವ ಗುಣವಿದ್ದರೆ ಅದು ಸಫ್ದರ್ ಹಾಶ್ಮಿಯವರಲ್ಲಿ ಮಾತ್ರ. 1986ರಲ್ಲಿ ಹೊಸದಿಲ್ಲಿಯ ಡಿಟಿಸಿ ಒಮ್ಮಿಂದೊಮ್ಮೆಗೆ ಬಸ್‌ದರವನ್ನು ಏರಿಸಿದ್ದು, ಅದಕ್ಕೆ ತಕ್ಷಣದ ಪ್ರತಿಕ್ರಿಯೆಯಾಗಿ ಹಾಶ್ಮಿ ಅವರು ‘ಡಿಟಿಸಿ ಕಿ ದಾಂಧಲಿ’ ಎಂಬ ಬೀದಿ ನಾಟಕವನ್ನು ಹಲವು ಕಡೆಗಳಲ್ಲಿ ಆಡಿಸಿದಾಗ, ಅನಿವಾರ್ಯವಾಗಿ ದಿಲ್ಲಿ ಆಡಳಿತ ಬಸ್ ದರ ಏರಿಕೆಯನ್ನು ವಾಪಾಸು ಪಡೆಯಬೇಕಾಯಿತು ಎಂದವರು ನೆನಪಿಸಿ ಕೊಂಡರು.

ಸಪ್ಧರ್ ಹಾಶ್ಮಿ ಅವರ 24 ಬೀದಿ ನಾಟಕಗಳು 4000ಕ್ಕೂ ಅಧಿಕ ಪ್ರದರ್ಶನ ಗಳನ್ನು ಕಂಡಿವೆ. ಅವುಗಳು ನಡೆಯುತಿದ್ದುದು ಬೀದಿ ಬದಿಗಳಲ್ಲಿ, ವರ್ಕ್‌ಶಾಪ್‌ಗಳಲ್ಲಿ, ಪ್ಯಾಕ್ಟರಿಗಳ ಎದುರು. 1989ರ ಜ.1ರಂದು ಅವರು ‘ಹಲ್ಲಾ ಬೋಲ್’ ನಾಟಕವನ್ನು ದಿಲ್ಲಿ ಸಮೀಪದ ಘಾಝಿಯಾಬಾದ್‌ನ ಬೀದಿಯೊಂದರಲ್ಲಿ ಆಡಿಸುತಿದ್ದಾಗ, ರಾಜಕೀಯ ಪಕ್ಷವೊಂದರ ಗೂಂಡಾಗಳು ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದು, ಇದರಿಂದ ಅವರು ಜ.2ರಂದು ಸಾವನ್ನಪ್ಪಿದ್ದರು. ಅವರೊಂದಿಗೆ ನಾಟಕ ನೋಡಲು ಬಂದಿದ್ದ ವಲಸೆ ಕಾರ್ಮಿಕ ನೊಬ್ಬನೂ ಕೊಲೆಯಾಗಿದ್ದ ಎಂದು ಮಾಧವಿ ಭಂಡಾರಿ ತಿಳಿಸಿದರು.

ಸಪ್ಧರ್ ಹಾಶ್ಮಿ ಅವರ ಹೋರಾಟವನ್ನು ಮುಂದುವರಿಸಿರುವ ಹಾಶ್ಮಿ ಅವರ ಪತ್ನಿ ಮೊಲ್ಯಾಶ್ರೀ ಹಾಶ್ಮಿ, ಕೇವಲ 48 ಗಂಟೆಗಳಲ್ಲೇ ಹಾಶ್ಮಿ ಕೊಲೆ ನಡೆದ ಜಾಗದಲ್ಲೇ ಅದೇ ತಂಡದಿಂದ ಅದೇ ನಾಟಕವನ್ನು ಆಡಿಸಿದ್ದರು ಎಂದು ನುಡಿದರು.

ಸಫ್ಟರ್ ಹಾಶ್ಮಿ ಅವರ ನೆನಪುಗಳನ್ನು ಹಂಚಿಕೊಂಡ ಬೈಂದೂರಿನ ಶಿಕ್ಷಕ ರಾಘವೇಂದ್ರ ಕೆ.ಬೈಂದೂರು, ಹಾಶ್ಮಿ ಬೀದಿ ನಾಟಕಗಳ ಬಗ್ಗೆ ತುಂಬಾ ಅಸ್ಥೆಯಿಂದ ಕೆಲಸ ಮಾಡಿದ್ದರು. ಬೀದಿ ನಾಟಕ ಎಂಬುದು ಕಲೆಯ ಅತ್ಯಂತ ಪ್ರಾಮಾಣಿಕ ರೂಪ ಎಂದು ನಂಬಿದ್ದ ಹಾಶ್ಮಿ, ಜನರನ್ನು ನೇರವಾಗಿ ತಲುಪುವ, ಅವರೊಂದಿಗೆ ಸಂವಾದ ನಡೆಸುವುದಕ್ಕೆ, ಅವರೊಳಗೆ ಚಿಂತನ-ಮಂಥನಕ್ಕೆ ಪ್ರೇರೇಪಿಸಲು ಬೀದಿ ನಾಟಕವನ್ನು ಬಳಸಿಕೊಂಡಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಇಂದಿನ ಕುರ್ಚಿ ಕೇಂದ್ರಿತ ಪ್ರಭುತ್ವಕ್ಕೆ ರೈತರ ಗೋಳು, ಕೋವಿಡ್ ಸಂದರ್ಭದಲ್ಲಿ ನಿರಾಶ್ರಿತರ ಗೋಳು ಕೇಳುತ್ತಿಲ್ಲ. ಇಂಥ ಸಂದರ್ಭದಲ್ಲಿ ಸಫ್ದರ್ ಹಶ್ಮಿ ಅವರ ವಿಚಾರಗಳ ಮಂಥನದ ಅಗತ್ಯವಿದೆ ಎಂದರು.

ರಥಬೀದಿ ಗೆಳೆಯರು ಪ್ರಧಾನ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಷಿ, ಉಪಾದ್ಯಕ್ಷ ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು. ಉದ್ಯಾವರ ನಾಗೇಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರೆ, ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News