ಉಡುಪಿ: ಶ್ರೀಕೃಷ್ಣ ಮಠದ ವಾರ್ಷಿಕ ಸಪ್ತೋತ್ಸವ ಪ್ರಾರಂಭ

Update: 2021-01-09 15:57 GMT

ಉಡುಪಿ, ಜ.9: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ವಾರ್ಷಿಕ ಸಪ್ತೋತ್ಸವ ಇಂದು ರಾತ್ರಿ ಪ್ರಾರಂಭಗೊಂಡಿದ್ದು, ಜ.15ರವರೆಗೆ ಮುಂದುವರಿ ಯಲಿದೆ. ಇಂದಿನ ಕಾರ್ಯಕ್ರಮಗಳಲ್ಲಿ ಪರ್ಯಾಯ ಅದಮಾರು ಶ್ರೀಗಳಲ್ಲದೇ, ಕೃಷ್ಣಾಪುರ, ಪಲಿಮಾರು, ಕಾಣಿಯೂರು ಹಾಗೂ ಸೋದೆ ಮಠಾಧೀಶರು ಪಾಲ್ಗೊಂಡಿದ್ದರು.

ದ್ವೈತ ಮತ ಸ್ಥಾಪಕ ಮಧ್ವಾಚಾರ್ಯರು ಮಕರ ಸಂಕ್ರಮಣದಂದು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಸ್ಥಾಪಿಸಿದ ಸ್ಮರಣಾರ್ಥ ಸಪ್ತೋತ್ಸವ ಸಂಭ್ರಮ ತೆಪೋತ್ಸವ ಹಾಗೂ ರಥೋತ್ಸವದೊಂದಿಗೆ ಒಂದು ವಾರ ಕಾಲ ನಡೆಯುತ್ತದೆ. ಇದರ ಹಿನ್ನೆಲೆಯಲ್ಲಿ ಮಕರ ಸಂಕ್ರಮಣದ ದಿನವಾದ ಜ.14ರಂದು ರಾತ್ರಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವದ ಬಳಿಕ ರಥಬೀದಿಯಲ್ಲಿ ಮೂರು ತೇರುಗಳ ಉತ್ಸವ ಹಾಗೂ ಜ.15ರ ಬೆಳಗ್ಗೆ ಚೂರ್ಣೋತ್ಸವ ಸಹಿತ ಹಗಲು ರಥೋತ್ಸವ ನಡೆಯಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೊರಂಗ್ರಪಾಡಿಯ ವಿದ್ವಾನ್ ಸೀತಾರಾಮ ಆಚಾರ್ಯ, ಅದಮಾರಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾಗರತ್ನ ರಾವ್, ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಇವರನ್ನು ಪರ್ಯಾಯರು ಸನ್ಮಾನಿಸಿದರು.

ಬಳಿಕ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ನಾಳೆ ಸಂಜೆ ಬೆಂಗಳೂರಿನ ಸಂಗೀತಾ ಕಟ್ಟಿ ಮತ್ತು ಬಳಗಿಂದ ಹಿಂದೂಸ್ಥಾನಿ ಸಂಗೀತ ಕಚೇರಿ ಹಾಗೂ ದಾಸ ವಾಣಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News