ಯಕ್ಷಗಾನ ಸಂಶೋಧಕ ಡಾ.ಶ್ರೀಧರ ಉಪ್ಪೂರ ನಿಧನ

Update: 2021-01-10 16:32 GMT

ಉಡುಪಿ, ಜ.10: ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ, ಯಕ್ಷಗಾನ ಸಂಶೋಧಕ ಡಾ.ಶ್ರೀಧರ ಉಪ್ಪೂರ (68) ಇಂದು ಕೋಟೇಶ್ವರದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬಡಗುತಿಟ್ಟು ಯಕ್ಷಗಾನದ ಖ್ಯಾತನಾಮ ಭಾಗವತರು ಹಾಗೂ ಗುರುಗಳಾದ ನಾರ್ಣಪ್ಪ ಉಪ್ಪೂರರ ಪುತ್ರರಾದ ಇವರು ‘ಬಡಗುತಿಟ್ಟು ಯಕ್ಷಗಾನ ಪರಂಪರೆ, ಪ್ರಯೋಗ’ ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

ಮೋಹನ ತರಂಗಿಣಿ, ರಾಜಾ ಪ್ರಭಂಜನ, ಸತೀ ಮಾಯಾ ಹಾಗೂ ಧನ್ವಂತರಿ ಚಿಕಿತ್ಸೆ ಎಂಬ ನಾಲ್ಕು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು ಇವರು ತಂದೆಯವರ ಮೂಲಕ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು. ಉಡುಪಿ ಯಕ್ಷಗಾನ ಕಲಾರಂಗದಲ್ಲಿ ತಂದೆಯವರ ನೆನಪಿನಲ್ಲಿ ದತ್ತಿನಿದಿಯ ಮೂಲಕ ಕಳೆದ 22 ವರ್ಷಗಳಿಂದ ಯಕ್ಷಗಾನ ಹಿಮ್ಮೇಳ ಕಲಾವಿದರಿಗೆ ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ತಾನು ದುಡಿಯುತಿದ್ದ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ದೊಡ್ಡ ಮೊತ್ತದ ವಿದ್ಯಾರ್ಥಿವೇತನ ನೀಡುತಿದ್ದ ಡಾ.ಶ್ರೀಧರ ಉಪ್ಪೂರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News